ಹೈದರಾಬಾದ್/ನವದೆಹಲಿ:ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರ ಅವಧಿಗಿಂತ ಮೊದಲೇ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಚಿಂತನೆ ನಡೆಸಿದೆ. ಅದಕ್ಕೆ ಪೂರಕವಾಗಿ ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ತೆಲಂಗಾಣದ ಬಿಜೆಪಿ ಮುಖಂಡರ ಜತೆಗೆ ಪರಾಮರ್ಶೆ ನಡೆಸಿದರು.
ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲಾ 119 ಕ್ಷೇತ್ರಗಳಲ್ಲಿ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಹತ್ತು ಬೃಹತ್ ಪ್ರಮಾಣದ ರ್ಯಾಲಿ ನಡೆಸಲು ಕೂಡ ಸಿದ್ಧತೆ ನಡೆಸಲಾಗುತ್ತಿದೆ. ಅವುಗಳಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮತಿ ಇರಾನಿ ಸಮ್ಮುಖದಲ್ಲಿ ಕನಿಷ್ಠ ಹತ್ತು ಬೃಹತ್‌ರ‍್ಯಾಲಿ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಹೈದರಾಬಾದ್‌ನಲ್ಲಿ ನಡೆಯುವ ಪ್ರಧಾನ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ರ‍್ಯಾಲಿಯಲ್ಲಿ ದೆಹಲಿ ಅಬಕಾರಿ ಹಗರಣ, ಸಿಎಂ ಚಂದ್ರಶೇಖರ ರಾವ್ ಅವರ ಕುಟುಂಬ ನಡೆಸಿರುವ ಹಗರಣಗಳನ್ನು ಪ್ರಸ್ತಾಪಿಸಲಿದೆ. ಇದರ ಜತೆಗೆ 11 ಸಾವಿರ ಬೀದಿ ಸಭೆಗಳನ್ನೂ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಿಗದಿಯಾಗಿರುವಂತೆ ಡಿಸೆಂಬರ್‌ಗೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಬೇಕು. ಆದರೆ, ತೆಲಂಗಾಣ ರಾಷ್ಟ್ರ ಸಮಿತಿಯ ಹೆಸರನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲು ಮಾಡಿಕೊಂಡಿರುವ ಕೆ.ಚಂದ್ರಶೇಖರ ರಾವ್ ಅವರ ಪಕ್ಷ ಬಿಜೆಪಿ ಸಿದ್ಧತೆ ನಡೆಸುವ ಮುನ್ನವೇ ಚುನಾವಣೆ ಘೋಷಣೆ ಮಾಡಬೇಕು ಎಂಬ ಇರಾದೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಪರಾಮರ್ಶೆ ಸಭೆ ನಡೆಸಲಾಗಿದೆ. ಪ್ರಸಕ್ತ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ “ಪ್ರಜೆಗಳಿಗಾಗಿ ಬಿಜೆಪಿ ಭರವಸೆ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳು ಇವೆ. ಹಾಲಿ ವಿಧಾನ ಸಭೆಯಲ್ಲಿ ಬಿಜೆಪಿ ಒಂದು ಸ್ಥಾನ ಹೊಂದಿದೆ.
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದಿತ್ತು.