Advertisement

ರಾಹುಲ್‌ ಅಸ್ಸಾಂಗೆ ಭೇಟಿ ನೀಡೋದೇ ಪಿಕ್ನಿಕ್‌ಗಾಗಿ‌ :ಕಾಂಗ್ರೆಸ್‌ ವಿರುದ್ಧ BJP ವಾಗ್ಧಾಳಿ

10:34 PM Mar 22, 2021 | Team Udayavani |

ದಿಸ್ಪುರ: “ಚಹಾದ ನಾಡು’ ಅಸ್ಸಾಂನಲ್ಲಿ ರಾಜಕೀಯ ಹಬೆ ಮುಗಿಲು ಮುಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಪ್ರಚಾರದ ಮರುದಿನವೇ ಬಿಜೆಪಿಯ ಧುರೀಣರಾದ ಅಮಿತ್‌ ಶಾ, ಜೆ.ಪಿ. ನಡ್ಡಾ ಸೋಮವಾರ ಅಸ್ಸಾಂನ ಉದ್ದಗಲ ರ‍್ಯಾಲಿ ನಡೆಸಿ, ಕಾಂಗ್ರೆಸ್‌ ವಿರುದ್ಧ ಪುಂಖಾನುಪುಂಖ ಆರೋಪಗಳನ್ನು ಸಿಡಿಸಿದರು.

Advertisement

ಉದಲ್ಗುರಿ, ಜೊನಾಯ್‌ ಸೇರಿದಂತೆ ವಿವಿಧೆಡೆ ರ್ಯಾಲಿ ನಡೆಸಿದ ಗೃಹ ಸಚಿವ ಅಮಿತ್‌ ಶಾ, “ಇತ್ತೀಚೆಗೆ ರಾಹುಲ್‌ ಬಾಬಾ ಅಸ್ಸಾಂ ಭೇಟಿ ನೀಡಿದ್ದರು. ರಾಹುಲ್‌ ಅಸ್ಸಾಂಗೆ ಭೇಟಿ ನೀಡೋದೇ ಪಿಕ್ನಿಕ್‌ಗಾಗಿ. ಕಾರ್ಮಿಕರ ಜೊತೆ ಅವರು ಮಾತಾಡೋವಾಗ ನಂಗೆ ನಗು ಬರ್ತಿತ್ತು. ಏಕೆಂದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾವತ್ತೂ ಚಹಾ ತೋಟದ ಕಾರ್ಮಿಕರನ್ನು ಮಾತಾಡಿಸಿರಲಿಲ್ಲ’ ಎಂದು ಟೀಕಿಸಿದರು.

ಅದು ಹಿಂಸೆ ಯುಗ!:  ಅಸ್ಸಾಂನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕಾಲಘಟ್ಟ ಅದು ಹಿಂಸೆ ಯುಗ. ಅಂದು 5 ಸಾವಿರಕ್ಕೂ ಅಧಿಕ ಮಂದಿ ಉಗ್ರರಿಂದ ಹತರಾಗಿದ್ದರು. ಉಗ್ರರಿಗೆ ಕುಮ್ಮಕ್ಕು ನೀಡಿದ್ದ ಬೊಡೊ ಪೀಪಲ್ಸ್‌ ಫ್ರಂಟ್‌ ಮತ್ತು ಎಐಯುಡಿಎಫ್ ಜತೆಗೂಡಿಯೇ ಮತ್ತೆ ಕಾಂಗ್ರೆಸ್‌ ಮೈತ್ರಿ ಕಟ್ಟಿಕೊಂಡಿದೆ. ಇಂಥವರಿಂದ ಯಾವ ರೀತಿಯ ಶಾಂತಿ ನಿರೀಕ್ಷಿಸುವುದು ಸಾಧ್ಯ ಎಂದು ಪ್ರಶ್ನಿಸಿದರು.

ಅಸ್ಸಾಂಗೆ ನಾವು ಕೊಟ್ಟ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸಿದ್ದೇವೆ. ಬೊಡೊ ಅಕಾರ್ಡ್‌ ಸೇರಿದಂತೆ ಎಲ್ಲವನ್ನೂ ಕೇವಲ ಎರಡೂವರೆ ವರ್ಷಗಳಲ್ಲಿ ಪೂರೈಸಿದ್ದೇವೆ. ಬೊಡೊ ಪ್ರದೇಶಗಳಲ್ಲಿ ನಮಗೆ ಶಾಂತಿ ಬೇಕೇ ವಿನಾಃ ಕಾಂಗ್ರೆಸ್‌ ಬಯಸುವ ಅಶಾಂತಿ ಬೇಕಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಆನೆಯಂತೆ ಕಾಂಗ್ರೆಸ್‌ಗೆ 2 ಹಲ್ಲು: ನಡ್ಡಾ
ಅಸ್ಸಾಂನಲ್ಲಿನ ಕಾಂಗ್ರೆಸ್‌ ಮೈತ್ರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಆನೆಯ ಎರಡು ಹಲ್ಲುಗಳಿಗೆ ಹೋಲಿಸಿದ್ದಾರೆ. “ಆನೆ ಹೇಗೆ ಒಂದು ಪ್ರದರ್ಶಿಸಲು, ಮತ್ತೂಂದು ಜಗಿಯಲು ಹಲ್ಲುಗಳನ್ನು ಇಟ್ಟುಕೊಂಡಿದೆಯೋ, ಹಾಗೆ ಕಾಂಗ್ರೆಸ್‌ ಕೂಡ’ ಎಂದು ಆರೋಪಿಸಿದ್ದಾರೆ.

Advertisement

“ಕೇರಳದಲ್ಲಿ ಮುಸ್ಲಿಂ ಲೀಗ್‌, ಸಿಪಿಐ (ಎಂ) ವಿರುದ್ಧ ಸ್ಪರ್ಧೆ… ಆದರೆ, ಪ. ಬಂಗಾಳ- ಅಸ್ಸಾಂನಲ್ಲಿ ಅವುಗಳೊಂದಿಗೆ ಮೈತ್ರಿ. ರಾಜಕೀಯ ಅವಕಾಶವಾದಿಗಳಿಂದ ಮಾತ್ರ ಇಂಥ ಮೈತ್ರಿ ಸಾಧ್ಯ’ ಎಂದು ಟಿಂಗ್‌ ಖಾಂಗ್‌ ಕ್ಷೇತ್ರದಲ್ಲಿನ ಪ್ರಚಾರದಲ್ಲಿ ಟೀಕಿಸಿದರು.

“ನಿಮಗೆ ಕಗ್ಗತ್ತಲು ಬೇಕಿದ್ದರೆ ಕಾಂಗ್ರೆಸ್‌ ಜತೆಗೆ ಹೋಗಿ. ಅಭಿವೃದ್ಧಿ ಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸಿ’ ಎಂದು ಕರೆಕೊಟ್ಟರು.

ಚಹಾದ ಎಲೆಗಳನ್ನು ಕೊಯ್ಯೋದು ಏಪ್ರಿಲ್‌ ಬಳಿಕ. ಆದರೆ, ಪ್ರಿಯಾಂಕಾ ವಾದ್ರಾ ಕೇವಲ ಫೋಟೋ ಶೂಟ್‌ಗಾಗಿ ಎಲೆ ಕೊಯ್ದಿದ್ದಾರೆ. ಇದು ಅಸ್ಸಾಮಿಗರ ಕಣ್ ಕಟ್ಟುವ ಪ್ರಯತ್ನ.
– ಜೆ.ಪಿ. ನಡ್ಡಾ

Advertisement

Udayavani is now on Telegram. Click here to join our channel and stay updated with the latest news.

Next