ಹಾಸನ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್ ರಾಹುಲ್ ಗಾಂಧಿಯು ಕೂಡಲೇ ದೇಶದ ಜನತೆಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ದೇಶದ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಾಡಿಕೊಂಡಿದ್ದ ಪರಿಷ್ಕೃತ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಭ್ರಷ್ಟಾಚಾರದಿಂದ ಕೂಡಿದೆ ಎಂದು ಸುಳ್ಳು ಆರೋಪ ಮಾಡಿದ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರು ಈ ಒಪ್ಪಂದವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದೇಶದ್ರೋಹದ ಹುನ್ನಾರ: ಈ ಹಿಂದೆ ದೇಶದ ಭದ್ರತೆ ಮತ್ತು ಸೈನಿಕ ಸುರಕ್ಷತೆಯ ಗೌಪ್ಯತೆಯನ್ನು ಶತ್ರು ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ದೇಶದ್ರೋಹದ ಹುನ್ನಾರ ಮಾಡಿ ರಾಹುಲ್‌ಗಾಂಧಿ ವಿಫಲರಾಗಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿಗಳನ್ನು ಬರಂಗಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾ ಆದ ನಂತರವೂ ದೇಶದ ಪ್ರಧಾನಿ ನರೇಂದ್ರಮೋದಿ ಅವರನ್ನು ಪದೇ ಪದೇ ಚೌಕಿದಾರ್ ಚೋರ್ ಹೈ ಎಂದು ಸರ್ವೋತ್ಛ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖೀಸಿರುವುದಾಗಿ ಸುಳ್ಳು ಮಾಹಿತಿ ಮತ್ತು ಸುದ್ದಿ ಹಬ್ಬಿಸಿದ ರಾಹುಲ್ ಗಾಂಧಿಯ ಹೇಳಿಕೆಗಳನ್ನು ಖಂಡಿಸಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿ ಮತ್ತೆ ಈ ರೀತಿ ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.
ದೇಶದ ಜನರ ಕ್ಷಮೆ ಯಾಚಿಸಲಿ: ರಾಹುಲ್ ಗಾಂಧಿಯು ತನ್ನ ಹೇಳಿಕೆಯನ್ನು ಹಿಂಪಡೆದು ಸುಪ್ರೀಂ ಕೋರ್ಟಿನಲ್ಲಿ ಕ್ಷಮೆ ಕೋರಿರುವುದು ನ್ಯಾಯಾಂಗ ನಿಂದನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾತ್ರ ಸೀಮಿತವಾಗಿರುತ್ತದೆ. ದೇಶದ ಸುಭದ್ರತೆಯ ಗೌಪ್ಯತೆಯನ್ನು ಬಹಿರಂಗಗೊಳಿಸುವ ರಾಹುಲ್ ಗಾಂಧಿಯ ಹುನ್ನಾರ ಮತ್ತು ಮನಸ್ಥಿತಿಯು ರಾಷ್ಟ್ರ ವಿರೋಧಿ ಹಾಗೂ ಶತ್ರುರಾಷ್ಟ್ರಗಳ ಸಂಚಿಗೆ ಪೂರಕವಾಗಿರುತ್ತದೆ.
ಅದರಿಂದ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಚೌಕಿದಾರ್ ಚೋರ್ ಎಂದು ಸುಳ್ಳು ಆರೋಪ ಮಾಡಿ ಶತ್ರುರಾಷ್ಟ್ರಗಳ ಸಂಚಿಗೆ ಪೂರಕವಾಗಿ ನಡವಳಿಕೆಗಳನ್ನು ನಡೆಸಿದಕ್ಕಾಗಿ ರಾಹುಲ್ ಗಾಂಧಿಯವರು ಕೂಡಲೇ ದೇಶದ ಹಾಗೂ ದೇಶದ ಜನತೆಯ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ನಗರಾಧ್ಯಕ್ಷ ಶೋಭನ್ ಬಾಬು, ಮುಖಂಡರಾದ ರೇಣುಕುಮಾರ್, ವಿಜಯ ವಿಕ್ರಮ್, ಭಾಸ್ಕರ್ ರಾವ್, ವೇಣುಗೋಪಾಲ್, ನಾರಾಯಣಗೌಡ, ಬಸವರಾಜು, ಕೆ.ಕೆ. ಪ್ರಸಾದ್, ಚನ್ನಕೇಶವ, ನಾಗೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿವೇಕಾನಂದರ ಪ್ರತಿಮೆ ಭಗ್ನ ಖಂಡಿಸಿ ಎಬಿವಿಪಿ ಪ್ರತಿಭಟನೆ
ಹಾಸನ: ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಇನ್ನೂ ಅನಾವರಣಗೊಳ್ಳದ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಭಗ್ನಗೊಳಿಸಿರುವುದನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಅವರು, ಜೆಎನ್‌ಯು ಆವರಣದಲ್ಲಿ ನಿರ್ಮಿಸಿದ್ದ ಅನಾವರಣಗೊಳ್ಳದ ಸ್ವಾಮಿ ವೇಕಾನಂದರ ಪ್ರತಿಮೆಗೆ ಹಾನಿ ಮಾಡಿರುವ ಕೃತ್ಯವನ್ನು ಖಂಡಿಸಿದರು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಎಬಿಪಿ ಮುಖಂಡರಾದ ಬೊಮ್ಮಣ್ಣ, ಪ್ರಮೋದ್, ದರ್ಶನ್, ಕೇಶವ, ದಿನೇಶ್, ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.