Advertisement

ಬಿಎಸ್‌ವೈಗೆ ನೋಟಿಸ್‌ ನೀಡಿದ್ದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ

07:15 AM Sep 24, 2017 | Team Udayavani |

ಬೆಂಗಳೂರು: ಬಿಜೆಪಿಯ ವಿನಯ್‌ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪೊಲೀಸ್‌ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿರುವುದನ್ನು ಖಂಡಿಸಿ ಪಕ್ಷದ ಮುಖಂಡರು ಶನಿವಾರ ಮಹಾಲಕ್ಷ್ಮೀಪುರ ಪೊಲೀಸ್‌ ಠಾಣೆ ಎದುರು ಧರಣಿ ನಡೆಸಿದರು.

Advertisement

“ವಿನಯ್‌ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಥವಾ ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ನಮ್ಮ ವಿರೋಧವಿಲ್ಲ. ರಾಜ್ಯದ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷ ಮುಂತಾದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಅವರನ್ನು ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಬರುವಂತೆ ನೋಟಿಸ್‌ ಜಾರಿ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಅಗತ್ಯ ಬಿದ್ದರೆ ಪೊಲೀಸರು ಯಡಿಯೂರಪ್ಪ ಅವರ ಮನೆಗೆ ಹೋಗಿ ವಿಚಾರಣೆ ನಡೆಸಬೇಕಿತ್ತು’ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತಾರೂಢ ಸಚಿವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಪೊಲೀಸರು, ಪ್ರತಿಪಕ್ಷ ನಾಯಕರಿಗೆ ಅನಗತ್ಯವಾಗಿ ನೋಟಿಸ್‌ ನೀಡಿ ಕಿರುಕುಳ ಕೊಡುತ್ತಿದ್ದಾರೆ. ಅದೇ ರೀತಿ ವಿನಯ್‌ ಅಪಹರಣ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನೀಡಿರುವ ನೋಟಿಸ್‌ ಕೂಡಲೇ ಹಿಂಪಡೆಯಬೇಕು ಮತ್ತು ನೋಟಿಸ್‌ ಜಾರಿ ಮಾಡಿದ ಎಸಿಪಿಯನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಲ್‌.ಎ.ರವಿಸುಬ್ರಹ್ಮಣ್ಯ, ಮಾಜಿ ಉಪಮೇಯರ್‌ ಎಸ್‌.ಹರೀಶ್‌, ಬಿಜೆಪಿ ಮಹಾನಗರ ಘಟಕಾಧ್ಯಕ್ಷ ಪಿ.ಎನ್‌.ಸದಾಶಿವ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಯ್ಯ, ಮುಖಂಡರಾದ ಎಂ.ನಾಗರಾಜ್‌, ಪ್ರಸನ್ನ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next