ಬೆಂಗಳೂರು: ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ನೂ ವಿಶ್ವಾಸಮತ ಯಾಚಿಸುತ್ತಿಲ್ಲ. ಇದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯದ ಹಲವೆಡೆ ಶನಿವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯದಲ್ಲಿ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೆಟ್ಟಿರುವ ಸ್ಪೀಕರ್ ಹಿಡಿದು “ಎಲ್ಲಿದೆಯೋ ನ್ಯಾಯ’ ಎಂಬ ಹಾಡನ್ನು ಹೇಳುವ ಮೂಲಕ ಮೈತ್ರಿ ಸರ್ಕಾರ ಮತ್ತು ಸ್ಪೀಕರ್ ವಿರುದ್ಧ ವ್ಯಂಗ್ಯವಾಡಿದರು. ಮೈತ್ರಿ ಸರ್ಕಾರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶಾಸಕರ ಬೆಂಬಲ ಇಲ್ಲ.
ಇದು ಈಗಾಗಲೇ ಸಾಬೀತಾಗಿದೆ. ಸಿಎಂ ಮೇಲೆ ವಿಶ್ವಾಸದ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಬಹುಮತವಿಲ್ಲದಂತಾಗಿದೆ. ಆದರೂ, ಅಧಿಕಾರದಿಂದ ಕೆಳಗಿಳಿಯದೆ ಕಾಲಹರಣ ಮಾಡಲಾಗುತ್ತಿದೆ. ಇದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಕೂಡ ಸಹಕರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಅಭದ್ರತೆಯ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜನರು ಸಮಸ್ಯೆಗಳ ಸುಳಿಗೆ ಸಿಲುಕಿ ಕಷ್ಟಪಡುತ್ತಿದ್ದಾರೆ. ಆದ್ದರಿಂದ, ಕೂಡಲೇ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಬೇಕು. ಇಲ್ಲದಿದ್ದರೆ ಅ ಧಿಕಾರದಿಂದ ಕೆಳಗಿಳಿಯಬೇಕು.
ಆ ಮೂಲಕ ಸಂವಿಧಾನ ಉಳಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಹುಬ್ಬಳ್ಳಿ, ರಾಯಚೂರು, ಕಲಬುರಗಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಸೇರಿ ರಾಜ್ಯದ ಇತರೆಡೆಯೂ ಬಿಜೆಪಿಯಿಂದ ಪ್ರತಿಭಟನೆಗಳು ನಡೆದವು.