ಬೆಂಗಳೂರು : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ .ಜಾರ್ಜ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಶನಿವಾರ ನಗರದ ಮೌರ್ಯ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಗಡುವು ನೀಡಿದೆ.
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಮುಖಂಡರು, ಶಾಸಕರು, ಸಂಸದರು ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಯಡಿಯೂರಪ್ಪ ಅವರು ಕಿಡಿ ಕಾರಿ ‘ಸೆಪ್ಟಂಬರ್ 26 ರ ಒಳಗೆ ಜಾರ್ಜ್ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡುವ ವರೆಗೆ ಆಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದರು.
ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಆದೇಶದ ಬಳಿಕ ಸಿಬಿಐ ನಡೆಸುತ್ತಿದ್ದು ಜಾರ್ಜ್ ಅವರು ಆರೋಪಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ಹಕ್ಕು ಇಲ್ಲ. ತಕ್ಷಣ ರಾಜೀನಾಮೆ ನೀಡಬೇಕು.ಇಲ್ಲವಾದರೆ ಸಿದ್ದರಾಮಯ್ಯ ಅವರು ವಜಾ ಮಾಡಲಿ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಟ್ರಾಫಿಕ್ ಜಾಮ್
ಪ್ರತಿಭಟನೆ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆ ಮೌರ್ಯ ಸರ್ಕಲ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಸಂಚಾರ ಸಾಧ್ಯವಾದೆ ಪರದಾಡುತ್ತಿದ್ದಾರೆ.