Advertisement

ಅಮಾಯಕ ಕಾರ್ಯಕರ್ತರ ಬಲಿಕೊಟ್ಟು ಬಿಜೆಪಿ ಅಧಿಕಾರ; ಕುಮಾರಸ್ವಾಮಿ

06:12 PM Jul 29, 2022 | Team Udayavani |

ಕೆ.ಆರ್‌.ನಗರ: ಅಮಾಯಕ ಕಾರ್ಯಕರ್ತರನ್ನು ಬಲಿಕೊಟ್ಟು ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಈ ಬಗ್ಗೆ ಸ್ವಾಮೀಜಿಗಳು, ಮುಖಂಡರು ಹಿಂದುಳಿದ, ಶೋಷಿತ ಸಮುದಾಯದವರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಮುದಾಯ ಭವನದ ಶಂಕುಸ್ಥಾಪನೆ, 131ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಇದಕ್ಕೆ ಬೆಂಕಿ ಹಚ್ಚುವವರು ಹೆಚ್ಚಾಗಿದ್ದು, ಅವರ ಬಗ್ಗೆ ಜನತೆ ಜಾಗೃತೆಯಿಂದಿರಬೇಕು ಎಂದು ವಿವರಿಸಿದರು.

ಹಣಕ್ಕೆ ಮತ ಮಾರಿಕೊಳ್ಳಬೇಡಿ: ಬಜೆಟ್‌ನಲ್ಲಿ ತೋಟಗಾರಿಕೆ ಇಲಾಖೆಗೆ 500 ಕೋಟಿ ರೂ. ಹಣ ಮೀಸಲಿರಿಸಿ, ರೈತರಿಗೆ ಉಪಯುಕ್ತ ಪರಿಕರಗಳನ್ನು ವಿತರಿಸುವುದರಲ್ಲೂ ಶೇ.8.5 ಕಮಿಷನ್‌ ಪಡೆಯಲಾಗುತ್ತಿದೆ. ಇದರಿಂದ ಬಿಜೆಪಿಯವರು 48 ಕೋಟಿ ರೂ. ಲಂಚ ಪಡೆದು, ಈ ಹಣದಿಂದ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.

ಒಂದು ಮತಕ್ಕೆ 2 ರಿಂದ 3 ಸಾವಿರ ರೂ. ನೀಡಲಿದ್ದಾರೆ. ಆದ್ದರಿಂದ ಹಿಂದುಳಿದ ವರ್ಗದವರು ಹಣಕ್ಕೆ ಮತ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು. ರೈತರು, ಬಡವರ ಬಗ್ಗೆ ಸದಾ ಚಿಂತನೆ ಮಾಡುವ ಚುನಾಯಿತ ಜನಪ್ರತಿನಿಧಿಗಳಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಮಾಜಿ ಸಿಎಂ, ಹಿಂದುಳಿದ ಮತ್ತು ಶೋಷಿತ ಸಮಾಜದವರು ಕಷ್ಟ ಎಂದು ಹೋದಾಗ ಜಾತಿ ಕೇಳದೆ ಸಹಾಯ ಮಾಡುವವರಿಗೆ ಆದ್ಯತೆ ನೀಡ ಬೇಕು ಎಂದು ಹೇಳಿದರಲ್ಲದೆ, ನಾನು ಈವರೆಗೂ ಕಷ್ಟ ಎಂದು ಬಂದವರಿಗೆ ಜಾತಿ ಕೇಳದೆ ಸಹಾಯ ಮಾಡಿದ್ದೇನೆ ಎಂದು ವಿವರಿಸಿದರು.

ಅರ್ಹರಿಗೆ ನೀಡುವಂತೆ ಒತ್ತಾಯ: ಬೇಡಜಂಗಮ ಸಮಾಜದವರು ಎಸ್‌ಸಿ ಪ್ರಮಾಣ ಪತ್ರ ಪಡೆಯುತ್ತಿದ್ದು, ಇದಕ್ಕೆ ಪರಿಶಿಷ್ಟ ಜಾತಿಯವರ ವಿರೋಧವಿದ್ದು, ಪ್ರಾಮಾಣಿಕವಾಗಿ ಶಿಕ್ಷಣ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮಾಜದ ಪ್ರಮಾಣ ಪತ್ರವನ್ನು ಉಳ್ಳವರಿಗೆ ನೀಡುವುದಕ್ಕೆ ನನ್ನ ವಿರೋಧವಿದೆ ಎಂದ ಎಚ್‌ಡಿಕೆ ಅವರು ಅರ್ಹರಿಗೆ ನೀಡುವಂತೆ ಒತ್ತಾಯಿಸಿದರು.

Advertisement

ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ಎಚ್‌ .ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದು 2023ಕ್ಕೆ ಸ್ಪಷ್ಟ ಬಹುಮತದಿಂದ ಗುದ್ದುಗೆ ಏರಲಿದ್ದಾರೆ. ಆನಂತರ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಈ ಸಮುದಾಯ ಭವನವನ್ನು ಸಮಾಜದ ಸುರ್ಪದಿಗೆ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಮೈಸೂರಿನ ಗಾಂಧಿನಗರದ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ, ಮೂಳೆತಜ್ಞ ಡಾ.ಮೆಹಬೂಬ್‌ಖಾನ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಚ್‌.ಸುಬ್ಬಯ್ಯ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಪುರಸಭೆ ಸದಸ್ಯರಾದ ಸರೋಜ ಮಹದೇವ್‌, ಕೆ.ಪಿ.ಪ್ರಭುಶಂಕರ್‌, ನವನಗರ ಅರ್ಬನ್‌ ಬ್ಯಾಂಕಿನ ಅಧ್ಯಕ್ಷ ಕೆ.ಎನ್‌.ಬಸಂತ್‌, ದಲಿತ ಮುಖಂಡರಾದ ಹನಸೋಗೆ ನಾಗರಾಜು, ಎಂ.ತಮ್ಮಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next