ಪಣಜಿ: ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ್ ಶೇಟ್ ತಾನವಡೆ ಅವರು ಗೋವಾದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ರಾಜ್ಯಸಭಾ ಚುನಾವಣಾಧಿಕಾರಿ ನಮ್ರತಾ ಉಲ್ಮಾನ್ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರೊಂದಿಗೆ ಸಂಪುಟ ಸಚಿವರು, ಬಿಜೆಪಿ ಶಾಸಕರು ಮತ್ತು ಪಕ್ಷದ ಸಂಚಾಲನಾ ಸಮಿತಿಯ ಸದಸ್ಯರು ಇದ್ದರು. ಹಾಲಿ ರಾಜ್ಯಸಭಾ ಸದಸ್ಯ ವಿನಯ್ ತೆಂಡೂಲ್ಕರ್ ಅವರ ರಾಜ್ಯಸಭಾ ಅವಧಿ ಜುಲೈನಲ್ಲಿ ಪೂರ್ಣಗೊಳ್ಳಲಿದ್ದು ರಾಜ್ಯಸಭೆಗೆ ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕವಾಗಿದ್ದು, 17 ಜುಲೈವರೆಗೆ ಅರ್ಜಿಗಳನ್ನು ಹಿಂಪಡೆಯಬಹುದು. ಜುಲೈ 24 ರಂದು ವಿಧಾನಸಭೆಯಲ್ಲಿ ಮತದಾನ ನಡೆಯಲಿದೆ.
ವಿರೋಧ ಪಕ್ಷದ ಶಾಸಕರು ಕೂಡ ನಮಗೆ ಮತ ನೀಡಲು ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಆಮ್ ಆದ್ಮಿ ಪಕ್ಷ (ಎಎಪಿ) ಗೋವಾದ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ಸಾಕಷ್ಟು ಸಂಖ್ಯಾಬಲವಿಲ್ಲದ ಕಾರಣ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಪಕ್ಷ ನಿರ್ಧರಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅಮಿತ್ ಪಾಲೇಕರ್ ಹೇಳಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದಿರಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಬಿಜೆಪಿಯ ಸಂಖ್ಯಾಬಲವನ್ನು ಗಮನಿಸಿದರೆ ಸದಾನಂದ ತಾನವಡೆ ಬಹುಮತದಿಂದ ಆಯ್ಕೆಯಾಗಲಿದ್ದಾರೆ. ಪ್ರತಿಪಕ್ಷಗಳು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ತಾನವಡೆ ರವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.