Advertisement

ಕಾಶ್ಮೀರ: ಬಿಜೆಪಿ ಬೆಂಬಲ ವಾಪಸ್‌ : ರಾಜ್ಯಪಾಲರೇ ದಿಕ್ಕು

04:50 AM Jun 20, 2018 | Karthik A |

ಶ್ರೀನಗರ/ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿನ ಪಿಡಿಪಿ-ಬಿಜೆಪಿ ಮೈತ್ರಿ ಮುರಿದಿದ್ದು, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಅಪರಾಹ್ನ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅವರು, ಬೆಂಬಲ ಹಿಂದೆಗೆದುಕೊಳ್ಳುವ ಘೋಷಣೆ ಮಾಡಿದರು. ಇತ್ತ ಬಿಜೆಪಿಯ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ. ಸದ್ಯಕ್ಕೆ ಯಾರೂ ಸರಕಾರ ರಚನೆಗೆ ಮುಂದೆ ಬಾರದ ಹಿನ್ನೆಲೆಯಲ್ಲಿ ಮತ್ತೆ ರಾಜ್ಯಪಾಲರ ಆಳ್ವಿಕೆ ಬರುವ ಸಾಧ್ಯತೆಗಳಿವೆ. ಇದೇ ವೇಳೆ ರಾಜ್ಯಪಾಲ ಎನ್‌.ಎನ್‌. ವೋಹ್ರಾ ಅವರು ರಾಜ್ಯಪಾಲರ ಆಳ್ವಿಕೆಗೆ ಶಿಫಾರಸು ಮಾಡಿದ ಪತ್ರವನ್ನು ರಾಷ್ಟ್ರಪತಿ ಕೋವಿಂದ್‌ ಅವರಿಗೆ ರವಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಿ, ಬೆಂಬಲ ಹಿಂದೆಗೆದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಜಮ್ಮುವಿನ ಸದ್ಯದ ಪರಿಸ್ಥಿತಿಯಲ್ಲಿ ಪಿಡಿಪಿ ಜತೆಗೆ ಹೋಗುವುದು ಕಠಿನವಾಗಿತ್ತು ಎಂದು ರಾಮ್‌ ಮಾಧವ್‌ ಹೇಳಿದರು.

Advertisement

2014ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಕಣಿವೆ ರಾಜ್ಯದಲ್ಲಿ ಸದೃಢ ಸರಕಾರ ರಚಿಸುವ ಸಲುವಾಗಿ ಅನಿವಾರ್ಯವಾಗಿ ಪಿಡಿಪಿ ಜತೆ ಸೇರಿ ಸರಕಾರ ಮಾಡಿದೆವು. ಅಲ್ಲದೆ, ಕಾಶ್ಮೀರದಲ್ಲಿ ಮತ್ತೆ ಶಾಂತ ಪರಿಸ್ಥಿತಿ ನಿರ್ಮಿಸಬೇಕಾಗಿತ್ತು. ಕುಸಿದುಹೋಗಿದ್ದ ಆರ್ಥಿಕತೆ ಮೇಲೆತ್ತುವ ಉದ್ದೇಶವಿತ್ತು ಎಂದರು. ಜತೆಗೆ ರಾಜ್ಯಪಾಲರ ಆಳ್ವಿಕೆಗೂ ಒತ್ತಾಯ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಮುಂದೇನು?

ಸದ್ಯ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ್ದಾರೆ. ಆದರೆ ಯಾರೊಬ್ಬರೂ ಸರಕಾರ ರಚನೆಗೆ ಮುಂದೆ ಬರುತ್ತಿಲ್ಲ. ಎಲ್ಲರೂ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ. ಆದರೂ ಮುಂದೇನಾಗಬಹುದು ಎಂಬ ಬಗ್ಗೆ ಒಂದು ನೋಟ.

1. ರಾಜ್ಯಪಾಲರ ಆಡಳಿತ
ಸದ್ಯಕ್ಕೆ ಗೋಚರಿಸುತ್ತಿರುವ ಏಕೈಕ ಮಾರ್ಗವೆಂದರೆ ಇದೊಂದೇ. ಅಲ್ಲದೆ ಬೆಂಬಲ ಹಿಂದೆಗೆದುಕೊಂಡ ತತ್‌ಕ್ಷಣವೇ ಬಿಜೆಪಿ ಮಾಡಿರುವ ಆಗ್ರಹವೂ ಇದೆ.

2. ಪಿಡಿಪಿ+ಎನ್‌ಸಿ+ಕಾಂಗ್ರೆಸ್‌ ಸರಕಾರ
ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಪಿಡಿಪಿಗೆ ಮಾತ್ರ ಸರಕಾರ ರಚನೆ ಹಕ್ಕು ಮಂಡಿಸುವ ಅವಕಾಶವಿದೆ. ಆದರೆ ಇದಕ್ಕೆ ನ್ಯಾಶನಲ್‌ ಕಾನೆ#ರೆನ್ಸ್‌ ಮತ್ತು ಕಾಂಗ್ರೆಸ್‌ ಬೆಂಬಲ ನೀಡಬೇಕು. ಈ ಎರಡು ಪಕ್ಷದ ನಾಯಕರ ಹೇಳಿಕೆ ಪ್ರಕಾರ ಇದೂ ಅಸಾಧ್ಯ

Advertisement

3. ಪಿಡಿಪಿ+ಎನ್‌ಸಿ+ಸ್ವತಂತ್ರ
ಬಿಜೆಪಿ ಮತ್ತು ಕಾಂಗ್ರೆಸ್‌ ಎರಡನ್ನೂ ಹೊರಗಿರಿಸಿ ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿ ಸರಕಾರ ರಚಿಸಬಹುದು. ಇಲ್ಲೂ ಪಿಡಿಪಿಯೇ ಸರಕಾರದ ನೇತೃತ್ವ ವಹಿಸಬೇಕಾಗಬಹುದು. ಆದರೆ ಬದ್ಧವೈರಿಗಳಾಗಿರುವ ಪಿಡಿಪಿ ಮತ್ತು ಎನ್‌.ಸಿ. ಒಂದುಗೂಡುವುದು ಕಷ್ಟ.

4. ಅಲ್ಪಮತದ ಸರಕಾರ
ಪಿಡಿಪಿಯೇ ಸರಕಾರ ರಚಿಸಿ ಬಾಹ್ಯವಾಗಿ ಎನ್‌.ಸಿ. ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆಯಬಹುದು. ಕಾಂಗ್ರೆಸ್‌ ಮತದಾನದಿಂದ ದೂರ ಉಳಿಯಬೇಕು.

ರಾಜೀನಾಮೆ ರವಾನೆ
ಬೆಂಬಲ ಹಿಂದೆಗೆತ ವರ್ತಮಾನ ಗೊತ್ತಾಗುತ್ತಿದ್ದಂತೆ ಸಿಎಂ ಮೆಹಬೂಬಾ ಮುಫ್ತಿ ಅವರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಯಾರೊಂದಿಗೂ ಸರಕಾರ ನಡೆಸುವ ಇಚ್ಛೆ ಇಲ್ಲ. ರಾಜ್ಯಪಾಲ ಆಳ್ವಿಕೆ ಹೇರಿಕೆ ಮಾಡಬಹುದು ಎಂದು ಹೇಳಿದ್ದಾರೆ. ಅಲ್ಲದೆ ಜಮ್ಮು – ಕಾಶ್ಮೀರವನ್ನು ಶತ್ರುಗಳ ಪ್ರದೇಶ ಎಂದು ಪರಿಗಣಿಸುವುದು ಬೇಡ. ಇಲ್ಲಿ ಯಾವುದೇ ಬಲಪ್ರಯೋಗದ ಮಾರ್ಗಗಳು ಯಶಸ್ವಿಯಾಗುವುದಿಲ್ಲ. ಜತೆಗೆ ಬಿಜೆಪಿ ನಿರ್ಧಾರ ಅಚ್ಚರಿ ತಂದಿದೆ ಎಂದೂ ಹೇಳಿ ಬಿಜೆಪಿ ನಿಲುವನ್ನು ಟೀಕಿಸಿದ್ದಾರೆ.

ಪಂಚ ಕಾರಣ
1. ಮುಫ್ತಿಯಿಂದ ಜಮ್ಮು ಅವಗಣನೆ, ಕಾಶ್ಮೀರ ಅಭಿವೃದ್ಧಿ.
2. ಪತ್ರಕರ್ತ ಸುಜಾತ್‌ ಹತ್ಯೆ ಸಹಿತ ಹೆಚ್ಚಾದ ಉಗ್ರರ ಉಪಟಳ.
3. ಕಥುವಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಗ್ಗೆ ಮುಫ್ತಿ ಮೃಧು ಧೋರಣೆ.
4. ಮುಫ್ತಿ ಏಕಪಕ್ಷೀಯ ನಿರ್ಧಾರ.
5. ಕಾಶ್ಮೀರ ಸಮಸ್ಯೆ ಈಡೇರದ ಕಾರಣ, ಮೋದಿ ವರ್ಚಸ್ಸಿಗೆ ಧಕ್ಕೆಯಾಗುವ ಆತಂಕ.

ಕಾಶ್ಮೀರದಲ್ಲಿ ಬಲಪ್ರಯೋಗದ ನೀತಿ  ಎಂದಿಗೂ ಯಶಸ್ವಿಯಾಗಲ್ಲ. ಮಾತುಕತೆ, ಮನವೊಲಿಕೆಯೊಂದೇ ಇರುವ ಮಾರ್ಗ. ಪಾಕ್‌ ಜತೆಯೂ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು.
– ಮೆಹಬೂಬಾ ಮುಫ್ತಿ, ನಿರ್ಗಮಿತ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next