Advertisement

ಪಂಚಾಯತ್‌ರಾಜ್‌ ವ್ಯವಸ್ಥೆ ತಿದ್ದುಪಡಿಗೆ ಬಿಜೆಪಿ ವಿರೋಧ: ಸಚಿವ ರೈ

03:25 AM Aug 02, 2017 | Team Udayavani |

ವಿಟ್ಲ: ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಪ.ಜಾ./ಪ.ಪಂ., ಹಿಂದುಳಿದ ವರ್ಗ, ಅಲ್ಪಸಂಖ್ಯಾಕರಿಗೆ ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಅಧಿಕಾರ ನೀಡಲು ಪ್ರಯತ್ನಿಸಿ, ತಿದ್ದುಪಡಿಗೆ ಕ್ರಮ ಕೈಗೊಂಡರು. ಆಗ ಬಿಜೆಪಿ ಅದನ್ನು ವಿರೋಧಿಸಿತ್ತು. ಸಾಮಾಜಿಕ ನ್ಯಾಯ, ಸ್ವಾಭಿಮಾನದ ಬದುಕು ನೀಡಿದ್ದು ಕಾಂಗ್ರೆಸ್‌ ಪಕ್ಷ ಹೊರತು ಬೇರಾವ ಪಕ್ಷವೂ ಅಲ್ಲ. ಬಿಜೆಪಿ ಸುಳ್ಳಿನ ಗದಾಪ್ರಹಾರ ನಡೆಸಿ ಅಧಿಕಾರವನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ ಪಕ್ಷದ ವಿವಿಧ ಯೋಜನೆಗಳ ಪರಿಣಾಮ ಬಲಾಡ್ಯರ, ಧನಿಕರ ಜಾಗ ಬಡವರಿಗೆ ಸಿಕ್ಕಿದೆ. ಅವರೆಲ್ಲ ಕಾಂಗ್ರೆಸ್‌ ಪಕ್ಷವನ್ನು ಮರೆಯಬಾರದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಹೇಳಿದರು. ಅವರು ಮಂಗಳ ಮಂಟಪದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಏರ್ಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

Advertisement

ಬಿಜೆಪಿ ನೇತೃತ್ವದ ಸರಕಾರದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರೈತರಿಗೆ ಸಾಲಮನ್ನಾ ಘೋಷಿಸಿದ್ದು ಮಾತ್ರ. ಮನ್ನಾ ಮಾಡಿದ ಹಣವನ್ನು ಎಲ್ಲ ಸಹಕಾರಿ ಸಂಘಗಳಿಗೆ ತುಂಬಿದ್ದು ಕಾಂಗ್ರೆಸ್‌ ಸರಕಾರ. ಅಲ್ಪಸಂಖ್ಯಾಕ ನಿಗಮ, ಹಿಂದುಳಿದ ವರ್ಗಗಳ ನಿಗಮಗಳ ಸಾಲವನ್ನು ಮತ್ತು ಆಶ್ರಯ ಮನೆಗಳ ಸಾಲವನ್ನು ಕಾಂಗ್ರೆಸ್‌ ಸರಕಾರ ಸಂಪೂರ್ಣ ಮನ್ನಾ ಮಾಡಿದೆ ಎಂದು ಅವರು ತಿಳಿಸಿದರು. ಎಚ್‌.ಡಿ.ಕುಮಾರಸ್ವಾಮಿ ಅವರ ಸರಕಾರ ವಿಚಿತ್ರವಾಗಿತ್ತು. ಆ ಸರಕಾರದ ತಲೆ ಜೆಡಿಎಸ್‌ನದ್ದು. ಕಾಲು ಆರೆಸ್ಸೆಸ್‌ನದ್ದಾಗಿತ್ತು ಎಂದು ವ್ಯಂಗ್ಯವಾಡಿದ ರೈ ಅವರು ಬಿಜೆಪಿಗೆ ಅಭಿವೃದ್ಧಿ ಬೇಡ. ಇಶ್ಯೂ ಬೇಸ್ಡ್ ಪೊಲಿಟಿಕ್ಸ್‌ ಮೂಲಕ ಅಧಿಕಾರ ಪಡೆಯುವ ಹುನ್ನಾರ ನಡೆಸುತ್ತದೆ. ಜಾತಿ, ಮತ ಭೇದವಿಲ್ಲದೇ ಸರ್ವರೂ ಸುಖವಾಗಿ, ಕ್ಷೇಮದ ಜೀವನ ನಡೆಸಲು ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕಾರ್ಯಕರ್ತರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.

ಆಶೋತ್ತರ ಈಡೇರಿಕೆ
ಆಹಾರ ಸಚಿವ ಯು.ಟಿ.ಖಾದರ್‌ ಮಾತನಾಡಿ ಬಿಜೆಪಿ ಪಕ್ಷ ಕಟ್ಟುವುದರಲ್ಲಿ ನಂಬರ್‌ ವನ್‌. ಕಾಂಗ್ರೆಸ್‌ ಊರನ್ನು ಅಭಿವೃದ್ಧಿಪಡಿಸುವುದರಲ್ಲಿ ನಂಬರ್‌ ವನ್‌. ಕೋಟಿಗಟ್ಟಲೆ ರೂ.ಅನುದಾನ ತಂದು ರಸ್ತೆ, ಸೇತುವೆ, ನೀರು, ವಿದ್ಯುತ್‌ ನೀಡಿ, ಜನರ ಆಶೋತ್ತರಗಳನ್ನು ಈಡೇರಿಸಿದೆ. ಅಷ್ಟು ಮಾತ್ರ ಸಾಲದು. ಬಿಜೆಪಿಯಂತೆ ಕಾಂಗ್ರೆಸ್‌ ಕೂಡಾ ಪಕ್ಷ ಕಟ್ಟುವುದರಲ್ಲಿ ನಂಬರ್‌ ವನ್‌ ಆಗಬೇಕಾಗಿದೆ ಎಂದರು. ಎಐಸಿಸಿ ಕಾಂಗ್ರೆಸ್‌ ಉಸ್ತುವಾರಿ, ಮೈಸೂರು ವಿಭಾಗೀಯ ಕಾರ್ಯದರ್ಶಿ ವಿಷ್ಣುನಾಥನ್‌ ಅವರು ಸಮಾವೇಶವನ್ನು ಉದ್ಘಾಟಿಸಿ, ಬೂತ್‌ ಮಟ್ಟದ ಕಾರ್ಯಕರ್ತರು ಶ್ರಮಿಸಿದಾಗ ಗೆಲುವಿನ ಹಾದಿ ಸುಗಮ. ಸಿದ್ದರಾಮಯ್ಯ ಸರಕಾರ ಎಲ್ಲ ವರ್ಗಗಳ ಜನರಿಗೆ ಬೇಕಾದ ಸೌಲಭ್ಯಗಳನ್ನು ವಿವಿಧ ಭಾಗ್ಯಗಳ ಮೂಲಕ ನೀಡಿದೆ. ಅಬ್ಬರದ ಪ್ರಚಾರದಿಂದ ಜನಪ್ರಿಯತೆ ಪಡೆದ ನರೇಂದ್ರ ಮೋದಿಯಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಮೋದಿ ಕಳೆದ ಕೆಲ ವರ್ಷಗಳಿಂದ ಮಾಧ್ಯಮದ ಮುಂದೆ ಬರಲು ಭಯಪಡುತ್ತಿದ್ದು, ರೇಡಿಯೋದಲ್ಲಿ ಯಾರೂ ಪ್ರಶ್ನಿಸಲಾಗದಿರುವುದರಿಂದ ಅಲ್ಲಿ ಮಾತನಾಡುತ್ತಿದ್ದಾರೆ. ನೋಟ್‌ ಬ್ಯಾನ್‌ನಿಂದ ದೇಶದ 1.50 ಲಕ್ಷ ಜನರು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದರು.

ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ ಜನರಿಗೆ ನೀಡಿದ ಭರವಸೆಯನ್ನು ನಾಲ್ಕು ವರ್ಷಗಳಲ್ಲೇ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣವಾಗಿ ಪೂರೈಸಿದೆ. ಬಿಜೆಪಿ ಮನೆ ಮನೆಗೆ ಭೇಟಿಯಿತ್ತು ಪುಸ್ತಕ ನೀಡಿ ನಾಟಕ ಕಂಪನಿ ಆರಂಭಿಸಿದೆ. ಮುಂದಿನ ಚುನಾವಣೆಯನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಮತ್ತೆ ಗೆದ್ದು ಬರುವ ಭರವಸೆ ಇದೆ ಎಂದು ಹೇಳಿದರು. ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ನಾವು ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇವೆ. ಕಾರ್ಯಕರ್ತರು ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರುತ್ತದೆ. ಡಿ. ವಿ. ಸದಾನಂದ ಗೌಡರಿಗೆ ರಮಾನಾಥ ರೈ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

ದ.ಕ.‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಎಚ್‌.ಸಿ.ಸವಿತಾ ರಮೇಶ್‌, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೀಕ್ಷಕ ಎಂ.ರಾಜ್‌ಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಇಬ್ರಾಹಿಂ, ಕಾರ್ಯದರ್ಶಿ ಎಂ.ಎಸ್‌.ಮಹಮ್ಮದ್‌, ಜಿ.ಪಂ.ಸದಸ್ಯೆ ಮಂಜುಳಾ ಮಾವೆ, ಜಿಲ್ಲಾ ಕಿಸಾನ್‌ ಘಟಕ ಅಧ್ಯಕ್ಷ ಉಮಾನಾಥ್‌ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫ‌ಝಲ್‌ ರಹೀಮ್‌, ಬಂಟ್ವಾಳ ಇಂಟಕ್‌ ಅಧ್ಯಕ್ಷ ರಮಾನಾಥ ವಿಟ್ಲ, ಪದವೀಧರ ಕ್ಷೇತ್ರದ ಅಭ್ಯರ್ಥಿ ದಿನೇಶ್‌, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್‌ ಪಕ್ಕಳ, ತಾ.ಪಂ.ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಅಕ್ರಮ ಸಕ್ರಮ ಸಮಿತಿಯ ವಾಸು ನಾಯ್ಕ, ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೆ. ನಝೀರ್‌, ಕಾರ್ಮಿಕ ವಿಭಾಗದ ಅಧ್ಯಕ್ಷ ಮುರಳೀಧರ ಶೆಟ್ಟಿ ಕಲ್ಲಾಜೆ, ಹಿಂದುಳಿದ ವರ್ಗದ ಅಧ್ಯಕ್ಷ ಉಲ್ಲಾಸ್‌ ಕೋಟ್ಯಾನ್‌, ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ಸೋಮನಾಥ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ತೌಸಿಫ್‌ ಉಪ್ಪಿನಂಗಡಿ, ಪುತ್ತೂರು ತಾ| ಇಂಟಕ್‌ ಅಧ್ಯಕ್ಷ ಜಯಪ್ರಕಾಶ್‌, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಕೇಪು ಗ್ರಾ.ಪಂ.ಸದಸ್ಯ ಅಬ್ದುಲ್‌ ಕರೀಂ ಕುದ್ದುಪದವು, ಪೆರುವಾಯಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಪುಷ್ಪಲತಾ ಎಂ. ಶೆಟ್ಟಿ, ಕವಿತಾ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲು ಉಪಸ್ಥಿತರಿದ್ದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಎಂ.ಪ್ರವೀಣ್‌ಚಂದ್ರ ಆಳ್ವ ಸ್ವಾಗತಿಸಿದರು. ನಿರಂಜನ ರೈ ಮಟಂದಬೆಟ್ಟು, ನೌಫಲ್‌ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Advertisement

ಪುತ್ತೂರಿಗೆ ಶಕು ಅಕ್ಕ, ಬಂಟ್ವಾಳಕ್ಕೆ  ರೈ 
ಮುಂದಿನ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ತಯಾರಿ ನಡೆಸುವ ಉದ್ದೇಶದಿಂದಲೇ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು, ಎಐಸಿಸಿ ಕಾಂಗ್ರೆಸ್‌ ಉಸ್ತುವಾರಿ ವಿಷ್ಣುನಾಥನ್‌, ಸಚಿವ ರೈ ಮತ್ತು ಯು.ಟಿ. ಖಾದರ್‌ ಅವರ ಮಾತುಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸಚಿವ ರಮಾನಾಥ ರೈ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಶಕುಂತಳಾ ಟಿ. ಶೆಟ್ಟಿ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ.
– ರಮಾನಾಥ ರೈ 

Advertisement

Udayavani is now on Telegram. Click here to join our channel and stay updated with the latest news.

Next