ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಹೈಡ್ರಾಮಾ ನಡೆದಿದ್ದು, ಭದ್ರತಾ ಲೋಪ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಯಲ್ಲಿ ಶುಕ್ರವಾರ ಒಂದು ದಿನದ ಮಟ್ಟಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯಾತ್ರೆ ಸ್ಥಗಿತಗೊಳಿ ಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಪೊಲೀಸರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನೂ ಮಾಡಿದ್ದಾರೆ.
ಬೆಳಗ್ಗೆ 9 ಗಂಟೆಗೆ ಖಾಜಿಗುಂಡ್‌ನ ಹಳೆಯ ಹೆದ್ದಾರಿಯಲ್ಲಿ ಯಾತ್ರೆ ಆರಂಭಗೊಂಡಿತ್ತು. ಬನಿ ಹಾಲ್‌ನಿಂದ ಇನ್ನೇನು ಯಾತ್ರೆ ಕಾಶ್ಮೀರ ಕಣಿವೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ, ಯಾತ್ರೆಗೆ ಒದಗಿಸ ಲಾಗಿದ್ದ ಭದ್ರತೆಯಲ್ಲಿ ಲೋಪ ಕಂಡುಬಂದ ಕಾರಣ ರಾಹುಲ್ ಗಾಂಧಿ ಅವರು ಮುಂದುವರಿ ಯದಂತೆ ಆಯೋಜಕರು ತಡೆದರು.
“ಪೊಲೀಸರು ಜನದಟ್ಟಣೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲ ರಾಗಿದ್ದಾರೆ. ಪೊಲೀಸ್ ವ್ಯವಸ್ಥೆಯೇ ಕುಸಿದು ಹೋಗಿದೆ’ ಎಂದು ಆರೋಪಿಸಿದ ರಾಹುಲ್, ದಿನದ ಮಟ್ಟಿಗೆ ಯಾತ್ರೆ ಸ್ಥಗಿತಗೊಳಿಸಿದರು. ಸೂಕ್ತ ಬಂದೋಬಸ್ತ್ ಕಲ್ಪಿಸಿದ ಬಳಿಕವೇ ಯಾತ್ರೆ ಮುಂದುವರಿಸುವುದಾಗಿ ತಿಳಿಸಿದರು.
ಇದೇ ವೇಳೆ, “ಖಾಜಿಗುಂಡ್‌ನಲ್ಲಿ ರಾಹುಲ್ ಗಾಂಧಿಯವರ ಭದ್ರತಾ ಸಿಬಂದಿಯನ್ನು ಏಕಾಏಕಿ ವಾಪಸ್ ಪಡೆದಿದ್ದೇಕೆ? ಇದು ಭಾರತ್ ಜೋಡೋ ಯಾತ್ರೆಯಲ್ಲಿ ಗಂಭೀರ ಭದ್ರತಾ ಲೋಪ ಎಸಗಿದಂತಲ್ಲವೇ? ಇದಕ್ಕೆ ಆದೇಶ ಕೊಟ್ಟವರು ಯಾರು?’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, “ಬನಿಹಾಲ್‌ನಲ್ಲಿ ಯಾತ್ರೆಗೆ ದೊಡ್ಡಮಟ್ಟದಲ್ಲಿ ಜನಸಂದಣಿ ಸೇರುತ್ತದೆ ಎಂಬ ಮಾಹಿತಿಯನ್ನೇ ನಮಗೆ ಕೊಟ್ಟಿರಲಿಲ್ಲ. ಭದ್ರತಾ ಲೋಪ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಒಮರ್ ಅಬ್ದುಲ್ಲಾ ಭಾಗಿ: ಶುಕ್ರವಾರ ಬನಿಹಾಲ್‌ನಲ್ಲಿ ಜೋಡೋ ಯಾತ್ರೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರೂ ಭಾಗಿಯಾದರು. ಭದ್ರತಾ ಲೋಪದ ಕುರಿತು ಅಬ್ದುಲ್ಲಾ ಅವರೂ ಪ್ರತಿಕ್ರಿಯಿಸಿ, “ಯಾತ್ರೆಯು ಕಾಶ್ಮೀರವನ್ನು ಪ್ರವೇಶಿಸುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಒಂದು ಸುತ್ತು ಭದ್ರತಾ ಪಡೆಯೇ ಕಣ್ಮರೆಯಾಯಿತು. ನಾನಿದನ್ನು ಕಣ್ಣಾರೆ ನೋಡಿದೆ’ ಎಂದರು.