ಬೆಂಗಳೂರು: “ಬಿಜೆಪಿ ಸರ್ಕಾರವನ್ನು ಉರುಳಿಸಲು ಬಿಡುವುದಿಲ್ಲ’ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಹೆಚ್ಚು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮೈತ್ರಿ ಸರ್ಕಾರ ಪತನವಾದ ನಂತರ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರುತ್ತಿದ್ದ ಕುಮಾರಸ್ವಾಮಿಯವರು ಇದ್ದಕ್ಕಿದ್ದಂತೆ ಬಿಜೆಪಿ ಪರ ಒಲವಿರುವಂತೆ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರು ಹೆಚ್ಚಿನ ಮಹತ್ವ ನೀಡುವ ಗೋಜಿಗೆ ಹೋದಂತಿಲ್ಲ.
ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಆರೋಪ ಮಾಡುತ್ತಲೇ ಬಂದಿರುವ ಕುಮಾರಸ್ವಾಮಿ, ಏಕಾಏಕಿ ಬಿಜೆಪಿ ಬೆಂಬಲಿಸುವ ರೀತಿ ಯಲ್ಲಿ ಮಾತನಾಡಿರುವುದರ ಹಿಂದಿನ ಮರ್ಮವನ್ನು ಸುಲಭವಾಗಿ ಊಹಿಸಬಹುದು. ಈಗಾಗಲೇ ಜೆಡಿಎಸ್‌ನ ಹಲವು ಶಾಸಕರು ಬಿಜೆಪಿ, ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರನ್ನು ಹಿಡಿದಿಟ್ಟುಕೊಳ್ಳುವ ತಂತ್ರದ ಭಾಗವಾಗಿ ಕುಮಾರಸ್ವಾಮಿಯವರು ಈ ರೀತಿಯ ಹೇಳಿಕೆ ನೀಡಿದಂತಿದೆ ಎಂದು ಸಚಿವರೊಬ್ಬರು ತಿಳಿಸಿದರು.
ಅನಿವಾರ್ಯ ಸಂದರ್ಭ ಬಂದರೆ ಬಿಜೆಪಿ ಸರ್ಕಾರ ಉಳಿಸಲು ಬೆಂಬಲ ನೀಡಲೂ ಸಿದ್ಧ ಎಂಬ ಸಂದೇಶ ರವಾನಿಸುವ ಮೂಲಕ ಪಕ್ಷ ತೊರೆಯುವ ಚಿಂತನೆಯಲ್ಲಿರುವ ಜೆಡಿಎಸ್ ಶಾಸಕರನ್ನೂ ವಿಶ್ವಾಸದಲ್ಲಿಟ್ಟುಕೊಳ್ಳುವ ಪ್ರಯತ್ನವಿರಬಹುದು. ಇದಕ್ಕೆಲ್ಲಾ ಬಿಜೆಪಿ ಹೆಚ್ಚಿನ ಮಹತ್ವ ನೀಡುವುದಿಲ್ಲ. ಕಳೆದ ವರ್ಷ ಮಡಿಕೇರಿಯಲ್ಲಿ ನೆರೆ, ಭೂಕುಸಿತ ಉಂಟಾದಾಗ ಕುಮಾರಸ್ವಾಮಿಯವರ ಸರ್ಕಾರ ಹೇಗೆ ಸ್ಪಂದಿಸಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಟಾಂಗ್: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಕುಮಾರಸ್ವಾಮಿಯವರು ರೀತಿಯ ಹೇಳಿಕೆ ನೀಡಿದಂತಿದೆಯೇ ಹೊರತು ಬಿಜೆಪಿಯನ್ನು ಓಲೈಸುವ ಉದ್ದೇಶವಿದ್ದಂತಿಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಭವ್ಯ ಸ್ವಾಗತ ಕೋರಿದ ವಿಚಾರದಲ್ಲೂ ಕುಮಾರಸ್ವಾಮಿಯವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಏನಾದರೂ ಆಗಲಿ ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂಬಂತೆ ಪ್ರತಿಪಕ್ಷ ಜೆಡಿಎಸ್ ಹೇಳಿರುವುದು ಸಹಜವಾಗಿಯೇ ಸರ್ಕಾರದ ಉತ್ಸಾಹವನ್ನು ಹೆಚ್ಚಿಸುತ್ತದೆ. ಅದನ್ನು ಹೊರತುಪಡಿಸಿ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮತ್ತೂಬ್ಬ ಸಚಿವರು ತಿಳಿಸಿದರು.
ಮನಸ್ಸಿನಲ್ಲಿರುವುದು ಮಾತಿನ ಮೂಲಕ ಬಂದಿದೆ: ಬಿಜೆಪಿ ಸರ್ಕಾರವನ್ನು ಉರುಳಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅನರ್ಹತೆಗೊಂಡ ಶಾಸಕ ಎಂ.ಟಿ.ಬಿ. ನಾಗರಾಜ್, ಅವರ ಮನಸ್ಸಿನಲ್ಲಿರುವುದು ಮಾತಿನ ಮೂಲಕ ಬಂದಿದೆ. ಅವರೇ ಹೇಳಿದಂತೆ ಅವರ ಬೆಂಬಲ ಬಿಜೆಪಿಗೆ ಇದೆ ಎಂದು ಹೇಳಿದರು.