ಬಾಗಲಕೋಟೆ : ದೀಪ ಆರುವ ಮುನ್ನ ಹೆಚ್ಚಿಗೆ ಉರಿಯುತ್ತದೆ. ಹಾಗೆಯೇ ವಿಜಯಪುರದವರ (ಶಾಸಕ ಯತ್ನಾಳ ಹೆಸರು ಹೇಳದೇ) ಪರಿಸ್ಥಿತಿಯೂ ಹಾಗೆಯೇ ಆಗಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ನೂತನ ಉಪಾಧ್ಯಕ್ಷ ಡಾ|ಮುರುಗೇಶ ನಿರಾಣಿ ಹೇಳಿದರು.
ರವಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಸ್‌ನಲ್ಲಿ ಸಂಚರಿಸಿ, ಬಸ್ ನಿಲ್ದಾಣದಲ್ಲಿಯೇ ಮಲಗಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರಿಂದ ನಾವೆಲ್ಲ ಅಧಿಕಾರಕ್ಕೆ ಬಂದಿದ್ದೇವೆ ಎಂದರು.
ಇನ್ನು ವಿಶ್ವದ ಮುಂದುವರೆದ ದೇಶಗಳೊಂದಿಗೆ ಭಾರತ ಪೈಪೋಟಿ ನಡೆಸಿ, ಆರ್ಥಿಕವಾಗಿ ವಿಶ್ವಕ್ಕೆ 3ನೇ ಸ್ಥಾನದಲ್ಲಿ ಭಾರತವಿದೆ. ಇಂತಹ ನಾಯಕ ಮೋದಿ ಅವರನ್ನು ಪುನಃ ಪ್ರಧಾನಿ ಮಾಡಬೇಕು ಎಂಬುದು ನಮ್ಮೆಲ್ಲರ ಬಯಕೆ. ಆದರೆ, ಕೆಲವರು, ಸಣ್ಣ ಹುಡುಗರಂತೆ ಮಾತನಾಡುತ್ತಿದ್ದಾರೆ. ಅವರು ಮಾತನಾಡಿದ್ದು ಅವರಿಗೇ ನೆನಪು ಇರುತ್ತದೆಯೋ ಇಲ್ವೊ ಗೊತ್ತಿಲ್ಲ. ಹಾದಿಬೀದಿಲಿ ಮಾತನಾಡುವವರ ಬಗ್ಗೆ ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.
ಯಡಿಯೂರಪ್ಪ ಅವರ ಪುತ್ರ ಎಂಬ ಮಾತ್ರಕ್ಕೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಅವರಿಗೆ ನೀಡಿದ ಹಲವು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಜ್ಯ ಯುವ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೇಂದ್ರದ ವರಿಷ್ಠರು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಯುವಕರಾದರೂ, ಸಂಘಟನೆಯಲ್ಲಿ ಸಾಕಷ್ಟು ಅನುಭವ ಇದೆ. ಹಿರಿಯರು-ಯುವಕರನ್ನು ಒಳಗೊಂಡ ಅತ್ಯುತ್ತಮ ಪದಾಽಕಾರಿಗಳ ತಂಡ ಸಿದ್ಧಗೊಂಡಿದೆ. ಇಡೀ ರಾಜ್ಯದಲ್ಲಿ ಸಂಚರಿಸಿ, ಪಕ್ಷ ಸಂಘಟನೆ ಮಾಡುತ್ತೇವೆ. ಮುಂದಿನ ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನವೂ ಗೆದ್ದು ತೋರಿಸುತ್ತೇವೆ ಎಂದು ಹೇಳಿದರು.
ಬೆಳಗ್ಗೆ ಒಂದು-ಸಂಜೆ ಮತ್ತೊಂದು ಹೇಳುವ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ ಒಂದು, ಸಂಜೆ ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಮೇಲು-ಕೀಳು, ಜಾತಿ-ಧರ್ಮ ಎಂಬುದು ವಿದ್ಯಾರ್ಥಿಗಳ ವಿಷಯದಲ್ಲಿ ಬರಬಾರದು ಎಂಬ ಉದ್ದೇಶಕ್ಕೆ ಹಿಜಾಬ್ ನಿಷೇಧಿಸಿತ್ತು. ಈ ವಿಷಯ ಕೋರ್ಟನಲ್ಲಿದೆ. ಆದರೂ, ಹಿಜಾಬ್ ನಿಷೇಧ ಹಿಂದಕ್ಕೆ ಪಡೆಯುತ್ತೇವೆ ಎಂದು ಬೆಳಗ್ಗೆ ಹೇಳಿದರು. ಸಂಜೆಯ ಹೊತ್ತಿಗೆ ಬೇರೆಯೇ ಹೇಳಿಕೆ ಕೊಟ್ಟರು. ಅವರು ಹೇಳಿದ್ದು, ಅವರಿಗೇ ನೆನಪು ಉಳಿಯುತ್ತಿಲ್ಲ ಎಂದು ಟೀಕಿಟಿಸಿದರು.
ರಾಜ್ಯ ಸರ್ಕಾರ ಕೋಮಾದಲ್ಲಿದೆ. ಯಾವಾಗ ಬೇಕಾದರೂ ಸರ್ಕಾರ ಡಮ್ ಎನ್ನಬಹುದು. ವೆಂಟಿಲೇಟರ್‌ನಲ್ಲಿರುವ ವ್ಯಕ್ತಿಯ ಆಕ್ಸಿಜನ್ ಪೈಪ್ ನಾವು ಕಿತ್ತಲ್ಲ. ಅವರಾಗೇ ಯಾವಾಗ ಬೇಕಾದರೂ ಹೋಗ್ತಾರೆ. ಬಿಟ್ಟಿ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದವರು, ಯಾವುದನ್ನೂ ಸರಿಯಾಗಿ ಜಾರಿಗೊಳಿಸಿಲ್ಲ. ಹೀಗಾಗಿ ರಾಜ್ಯದ 7 ಕೋಟಿ ಜನ, ಈ ಸರ್ಕಾರ ಬೇಗ ತೊಲಗಲಿ ಎಂದು ಬಯಸುತ್ತಿದ್ದಾರೆ ಎಂದರು.