ಬೆಂಗಳೂರು: ಬಿಜೆಪಿಯವರು ರಾಜ್ಯದಲ್ಲಿ ಹೊಸ ಸಂಪ್ರದಾಯ ಸೃಷ್ಟಿಸಿದ್ದು ಸತ್ತ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ವ್ಯಂಗ್ಯ ವಾಡಿದ್ದಾರೆ. .
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.ಸಂತೋಷ್ ಬಿಜೆಪಿ ಕಾರ್ಯಕರ್ತ ಆಗಿರಲಿಲ್ಲ ಎಂದರು.
‘ಸಂತೋಷ್ ಮತ್ತು ವಾಸೀಂ ಅವರು ಚಿಕ್ಕಂದಿನಿಂದಲೂ ಸ್ನೇಹಿತರಾಗಿದ್ದು, 2 ತಿಂಗಳ ಹಿಂದೆ ಅವರ ಸ್ನೇಹ ಮುರಿದು ಬಿದ್ದಿದೆ. ಅವರೆಲ್ಲಾ ಒಂದೇ ಗುಂಪಿನವರಾಗಿದ್ದಾರೆ. ವಾಸೀಂಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ, ಸ್ಕ್ರೂಡ್ರವರ್‌ನಿಂದ ಚುಚ್ಚಿದ್ದಾನೆ ಅಷ್ಟೆ ಆದರೆ ಸಂತೋಷ್ ಸಾವನ್ನಪ್ಪಿದ್ದಾನೆ’ ಎಂದರು.
‘ಬಿಜೆಪಿಯವರು ಯಾರೇ ಸತ್ತರೂ ನಮ್ಮ ಕಾರ್ಯಕರ್ತ ಎನ್ನುತ್ತಾರೆ, ಸತ್ತ ಮೇಲೆ ಪಕ್ಷಕ್ಕೆ ಸೇರಿಸಿಕೊಂಡು ನಮ್ಮ ಬೂತ್ ಮಟ್ಟದ ಕಾರ್ಯಕರ್ತ, ನಮ್ಮ ಸಂಘಟನೆಗೆ ಸೇರಿದವ ಎನ್ನುತ್ತಾರೆ. ಸತ್ತವರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರನ ವಂಶಸ್ಥರು’ ಎಂದರು.
‘ಬಿಜೆಪಿಯ ಅವಧಿಯಲ್ಲಿ, ಅಶೋಕ್ ಅವಧಿಯ 3 ವರ್ಷಗಳಲ್ಲಿ 96 ಕೊಲೆಗಳಾಗಿದ್ದು, ನಮ್ಮ ಅವಧಿಯಲ್ಲಿ ಬರೇ 67 ಮರ್ಡರ್ ಗಳಾಗಿವೆ ಅಷ್ಟೇ .30 ಮರ್ಡರ್ ಕಡಿಮೆ ಇವೆ’ಎಂದರು. ‘2 ವರ್ಷ ವಿ.ಎಸ್.ಆಚಾರ್ಯ ಅವರು ಗೃಹ ಸಚಿವರಾಗಿದ್ದರು, ಅವರು ಒಳ್ಳೆಯ ವ್ಯಕ್ತಿ ಅವರ ಬಗ್ಗೆ ಟೀಕೆ ಮಾಡುವುದಿಲ್ಲ’ ಎಂದರು.
’23 ಕಾರ್ಯಕರ್ತರು ಸತ್ತಿದ್ದಾರೆ ಎಂದು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕೇವಲ 9 ಕೊಲೆಗಳು ಮಾತ್ರ ಕೋಮು ವಿಚಾರಕ್ಕೆ ನಡೆದಿದೆ ಹೊರತು ಬೇರೆ ಎಲ್ಲಾ ಕೊಲೆಗಳು ಬೇರೆ, ಬೇರೆಕಾರಣಕ್ಕೆ ನಡೆದಿದೆ. ನಾವು ಒಂದು ಪುಸ್ತಕವನ್ನು ಹೊರ ತರುತ್ತಿದ್ದು ಯಾವ ಕೊಲೆಗಳು ಹೇಗೆ ಆಗಿವೆ ಎನ್ನುವುದನ್ನು ವಿವರಿಸುತ್ತೇವೆ. ಶೋಭಾ ಕರಂದ್ಲಾಜೆ, ರಾಜನಾಥ್ ಸಿಂಗ್ ಅವರು ಏನು ಮಾಡಿದ್ದಾರೆ ಎನ್ನುವುದನ್ನು ವಿವರಿಸುತ್ತೇವೆ’ ಎಂದರು.