Advertisement

ವಿಪ್ ಉಲ್ಲಂಘಿಸಿ ಕೈ ಸೇರಿದ್ದ ಬಿಜೆಪಿ ಜಿ.ಪಂ.ಸದಸ್ಯರು ಅನರ್ಹ: ಚುನಾವಣಾ ಆಯೋಗ

07:29 PM Jun 15, 2020 | Sriram |

ಧಾರವಾಡ : ಬಿಜೆಪಿ ಪಕ್ಷದಿಂದ ಧಾರವಾಡ ಜಿ.ಪಂ.ಗೆ ಸದಸ್ಯರಾಗಿ ಆಯ್ಕೆಯಾಗಿ ಜಿ.ಪಂ.ಅಧ್ಯಕ್ಷರಾಗಿದ್ದ ಬಿಜೆಪಿಯ ಚೈತ್ರಾ ಶಿರೂರ ಅವರ ವಿರುದ್ದ ಕಾಂಗ್ರೆಸ್ ಸದಸ್ಯರು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಮಂಡನೆ ಪರ ಮತ ಚಲಾವಣೆ ಮಾಡಿದ್ದ ನಾಲ್ವರು ಸದಸ್ಯರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿ, ಆದೇಶ ನೀಡಿದೆ.

Advertisement

ಗರಗ ಜಿ.ಪಂ.ಕ್ಷೇತ್ರದ ರತ್ನಾ ದಯಾನಂದ ಪಾಟೀಲ, ಗಳಗಿ ಕ್ಷೇತ್ರದ ಅಣ್ಣಪ್ಪ ಫಕ್ಕೀರಪ್ಪ ದೇಸಾಯಿ, ತಬಕದಹೊನ್ನಿಹಳ್ಳಿ ಕ್ಷೇತ್ರದ ಮಂಜವ್ವ ಶೇಖಪ್ಪ ಹರಿಜನ, ಗುಡಕೇರಿ ಕ್ಷೇತ್ರದ ಜ್ಯೋತಿ ಬೆಂತೂರ ಅವರದ್ದೇ ಸದಸ್ಯತ್ವ ಅನರ್ಹಗೊಂಡಿದೆ.

2019 ಫೆ.5 ರಂದು ನಡೆದ ವಿಶೇಷ ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಜಯವಾಗಿತ್ತು. ಒಟ್ಟು 22 ಸಂಖ್ಯಾ ಬಲದ ಜಿ.ಪಂ.ನಲ್ಲಿ 10 ಬಿಜೆಪಿ ಹಾಗೂ 11 ಕಾಂಗ್ರೆಸ್, ಓರ್ವ ಪಕ್ಷೇತರ ಸದಸ್ಯರಿದ್ದರು. ಈ ಪೈಕಿ ಅವಿಶ್ವಾಸ ಗೊತ್ತುವಳಿ ಪರ 15 ಮತಗಳು ಬೇಕಾಗಿತ್ತು. ಆದರೆ ಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 4 ಹಾಗೂ ಪಕ್ಷೇತರ ಸದಸ್ಯರು ಸೇರಿ ಒಟ್ಟು 16 ಮತಗಳು ಬಿದ್ದರೆ ಗೊತ್ತುವಳಿ ವಿರುದ್ದ ಬಿಜೆಪಿಯ 6 ಸದಸ್ಯರ ಮತಗಳು ಬಿದ್ದಿದ್ದವು. ಈ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡನೆ ಪರ ಹೆಚ್ಚು ಮತಗಳು ಬಿದ್ದು, ಅದು ಅಂಗೀಕಾರಗೊಳ್ಳುವ ಮೂಲಕ ಚೈತ್ರಾ ಶಿರೂರ ಅಧ್ಯಕ್ಷ ಸ್ಥಾನದಿಂದ ಕೆಳಗಡೆ ಇಳಿಯಬೇಕಾಗಿತ್ತು. ಇನ್ನೂ ಕಾಂಗ್ರೆಸ್ ಪರ ಮತ ಚಲಾಯಿಸಿದ ಆ ನಾಲ್ವರು ಬಿಜೆಪಿ ಸದಸ್ಯರು, ಪಕ್ಷದ ಜಿಲ್ಲಾಧ್ಯಕ್ಷರ ಕೈಗೆ ಸಿಕ್ಕಿರಲಿಲ್ಲ. ಅದರಲ್ಲೂ ಮಂಜವ್ವ ಹರಿಜನ ಅವರ ಅಪಹರಣ ಮಾಡಲಾಗಿದೆ ಎಂಬುದಾಗಿ ಕಲಘಟಗಿ ಠಾಣೆಯಲ್ಲಿ ದೂರ ಸಹ ದಾಖಲಿಸಲಾಗಿತ್ತು. ಜಿಲ್ಲಾಧ್ಯಕ್ಷರ ಕೈಗೆ ಸಿಗದೇ ತಿರುಗಾಡಿದ್ದ ಈ ನಾಲ್ವರು ಸದಸ್ಯರು, ವಿಶೇಷ ಸಭೆಯಲ್ಲಿ ಪ್ರತ್ಯಕ್ಷರಾಗಿದ್ದರು. 45 ವಿಷಯದಲ್ಲಿ ಮುಕ್ತಾಯಗೊಂಡ ಸಭೆಯ ಬಳಿಕ ಅವರನ್ನು ಪೊಲೀಸರ ಭದ್ರತೆಯಲ್ಲಿ ವಾಹನದ ಮೂಲಕವೇ ಸುರಕ್ಷಿತವಾಗಿ ಹೊರಗಡೆ ಕಳುಹಿಸಲಾಗಿತ್ತು. ಇದಾದ ಬಳಿಕ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್‌ನ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಆಗ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರಕಾರಕ್ಕೆ ಆಪರೇಷನ್ ಕಮಲದ ಭೀತಿ ನೀಡುತ್ತಿರುವ ಬಿಜೆಪಿ ಪಕ್ಷಕ್ಕೆ ಧಾರವಾಡ ಜಿ.ಪಂ.ನಲ್ಲಿ ಕಾಂಗ್ರೆಸ್ ಪಕ್ಷವೇ ಯಶಸ್ವಿಯಾಗಿ ಆಪರೇಷನ್ ಮಾಡಿ, ಜಿ.ಪಂ.ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳುವಂತೆ ಮಾಡಿತ್ತು. ಮಾಜಿ ಸಿಎಂ, ಬಿಜೆಪಿ ರಾಜ್ಯ

ನಾಯಕರಾಗಿರುವ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರಂತಹ ಘಟಾನುಘಟಿ ನಾಯಕರ ಜಿಲ್ಲೆಯಲ್ಲೇ ಆಪರೇಷನ್ ಕೈ ಆಗಿ ಜಿ.ಪಂ.ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲಗೊಂಡಿತ್ತು. ಹೀಗಾಗಿ ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದು, ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಅಂದಿನ ಬಿಜೆಪಿ ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಚುನಾವಣಾ ಆಯೋಗ ಅನರ್ಹಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next