Advertisement

ದೆಹಲಿಯಲ್ಲಿ ಬಿಜೆಪಿ ಶಾಸಕರ ಸಂಕ್ರಾಂತಿ

12:30 AM Jan 10, 2019 | |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ದಿಢೀರ್‌ ದೆಹಲಿ ಭೇಟಿ ಬಳಿಕ ಕಮಲ ಪಾಳೆಯದಲ್ಲಿ ತೆರೆಮರೆಯಲ್ಲೇ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಇನ್ನೊಂದೆಡೆ ಸಂಕ್ರಾಂತಿ ಸಮಯದಲ್ಲಿ ರಾಜ್ಯ ಬಿಜೆಪಿಯ ಎಲ್ಲ ಶಾಸಕರು, ಸಂಸದರು ದಿಲ್ಲಿಗೆ ದೌಡಾಯಿಸಲಿದ್ದಾರೆ.

Advertisement

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ರಾಜ್ಯ ಭೇಟಿ ರದ್ದಾದ ಬೆನ್ನಲ್ಲೇ ಜ.13ರಂದು ದೆಹಲಿಯಲ್ಲಿ ಅವರು ರಾಜ್ಯದ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಸಭೆ ಕರೆದಿದ್ದಾರೆ. 

ಅಲ್ಲದೆ, ಪ್ರಧಾನಿ ಮೋದಿ ಅವರೂ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವುದರ ಜತೆಗೆ, ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಕುರಿತು ಪ್ರಾಥಮಿಕ ಚರ್ಚೆ ನಡೆಯಲಿದೆ. ಈ ವಿಷಯವನ್ನು ಸ್ವತಃ ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಆದರೆ, ಇನ್ನೊಂದು ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಜ.13ರಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಈ ನಡುವೆ, ಮಂಗಳವಾರ ಬೆಳಗ್ಗೆ ದಿಢೀರ್‌ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾದ ಯಡಿಯೂರಪ್ಪ ಅವರು ಅದೇ ದಿನ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಬೆಳವಣಿಗೆ ಬಳಿಕ ಬಿಜೆಪಿಯ ಒಂದು ವರ್ಗ ಹೆಚ್ಚು ಕ್ರಿಯಾಶೀಲವಾದಂತಿದ್ದು, ಪಕ್ಷದ ವಲಯದಲ್ಲೇ ಚರ್ಚೆಗೆ ಗ್ರಾಸವಾಗುತ್ತಿದೆ.

ಈ ನಡುವೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಎಚ್‌.ಡಿ.ರೇವಣ್ಣ ಅವರು ಕಾಂಗ್ರೆಸ್‌ ಶಾಸಕರ ವರ್ತನೆ, ನಿಲುವಿನ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋರುತ್ತಿರುವ ಬಗ್ಗೆಯೂ ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನ ಕೇಳಿಬರುತ್ತಿದೆ. ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳಾಗುವ ನಿರೀಕ್ಷೆ ಎಂದು ಕೆಲ ನಾಯಕರು ಹೇಳುತ್ತಿದ್ದರೆ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಮಹತ್ತರ ರಾಜಕೀಯ ಬೆಳವಣಿಗೆಗಳಾಗುವುದಿಲ್ಲ ಎಂದು ವಿಶ್ಲೇಷಣೆಯೂ ಕೇಳಿಬಂದಿದೆ. ಇಷ್ಟರ ನಡುವೆ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಅಪೇಕ್ಷಿತರು ಸಜ್ಜಾಗಿದ್ದಾರೆ.

Advertisement

ಲೋಕ ಚುನಾವಣೆಗೆ ಸಿದ್ಧತೆ
ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ಸಿದ್ಧತೆ ಕಾರ್ಯಗಳನ್ನು ರಾಜ್ಯ ನಾಯಕರು ಚುರುಕುಗೊಳಿಸಿದ್ದಾರೆ. ರಾಜ್ಯದ ಲೋಕಸಭಾ ಕ್ಷೇತ್ರವಾರು ಪ್ರಭಾರಿಗಳ ಸಭೆ ಬುಧವಾರ ನಡೆಯಿತು. ನಾಯಕರಾದ ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಸಿ.ಟಿ.ರವಿ, ಎನ್‌.ರವಿಕುಮಾರ್‌ ಇತರರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. ಮುಖ್ಯವಾಗಿ ಚುನಾವಣಾ ಪ್ರಭಾರಿಗಳಿಗೆ ವಹಿಸಲಾಗಿರುವ ಕಾರ್ಯ ಜವಾಬ್ದಾರಿ, ಮೋರ್ಚಾಗಳಿಗೆ ನೀಡಿರುವ ಹೊಣೆಗಾರಿಕೆಗಳ ನಿರ್ವಹಣೆ ಬಗ್ಗೆಯೂ ಚರ್ಚೆ ನಡೆಯಿತು. ಎರಡು- ಮೂರು ಲೋಕಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ರಚಿಸಿರುವ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರು, ರೈತರು, ಹಿಂದುಳಿದ ವರ್ಗಗಳ ಸಮಾವೇಶ ನಡೆಸುವುದು,  ಬೈಕ್‌ ರ್ಯಾಲಿ, ಸಭೆ, ರ್ಯಾಲಿ, ಪ್ರವಾಸಗಳನ್ನು ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರತಿಯೊಂದು ಮೋರ್ಚಾಗಳಿಗೆ ನೀಡಿರುವ ಗುರಿ ತಲುಪಲು ಕಾರ್ಯಪ್ರವೃತ್ತವಾಗಬೇಕು ಎಂದು ಹಿರಿಯ ನಾಯಕರು ಸೂಚನೆ ನೀಡಿದ್ದಾರೆ. ಒಟ್ಟಾರೆ ಎಲ್ಲ ನಾಯಕರು, ಮುಖಂಡರು ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ.

ಎರಡು ದಿನ ರಾಷ್ಟ್ರೀಯ ಕಾರ್ಯಕಾರಿಣಿ
ಶುಕ್ರವಾರ ಹಾಗೂ ಶನಿವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ರಾಜ್ಯ ಬಿಜೆಪಿಯಿಂದ ಅಪೇಕ್ಷಿತರು ಗುರುವಾರ ಸಂಜೆ ಹಾಗೂ ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯವರ ಡೆಡ್‌ಲೈನಿಂದ ಸರ್ಕಾರಕ್ಕೆ ಏನೂ ಆಗಲ್ಲ:ಸಿಎಂ
ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಂಕ್ರಾಂತಿಗೆ ಒಂದು ಡೆಡ್‌ಲೈನ್‌ ಇದೆ. ಶಿವರಾತ್ರಿಗೊಂದು ಡೆಡ್‌ಲೈನ್‌ ಬರುತ್ತದೆ. ಯುಗಾದಿಗೆ ಮತ್ತೂಂದು ಡೆಡ್‌ ಲೈನ್‌ ಬರುತ್ತದೆ. ಬಿಜೆಪಿಯವರು ಸರ್ಕಾರ ಉರುಳಿಸಲು ನೀಡುವ ಡೆಡ್‌ಲೈನ್‌ಗಳು ಯಾವುದೂ ಯಶಸ್ವಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ನಂತರ ಸರ್ಕಾರಕ್ಕೆ ನಡುಕ ಶುರುವಾಗಲಿದೆ ಎಂಬ ಬಿಜೆಪಿಯವರ ಪ್ರತಿಕ್ರಿಯೆ ನೀಡಿದ ಅವರು, ಆರು ತಿಂಗಳಿಂದ ಡೆಡ್‌ಲೈನ್‌ಗಳು ಬರುತ್ತಿವೆ. ಅದರಿಂದ ಸರ್ಕಾರಕ್ಕೆ ಏನೂ ಸಮಸ್ಯೆ ಇಲ್ಲ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನನ್ನ ಅಭಿಪ್ರಾಯದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಸರಿಯಾಗಿ ಬಗೆ ಹರಿದಿದೆ. ಯಾರಿಗೂ ಅಗೌರವ ತೋರಲು ನಾನು ತಡೆ ಹಿಡಿದಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಕೆಲವು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ತಡೆ ಹಿಡಿಯಲಾಗಿತ್ತು. ಎಲ್ಲವೂ ಬಗೆ ಹರಿದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next