Advertisement
ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಹಾಗೂ ಜೆಡಿಎಸ್‌ನ ಎಂ.ಕೃಷ್ಣಾರೆಡ್ಡಿ ಅವರನ್ನು ಉಪ ಸಭಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಮೈತ್ರಿ ಪತನ ನಂತರ ರಮೇಶ್ ಕುಮಾರ್ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ರಾಜೀನಾಮೆ ನೀಡದೇ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
Related Articles
Advertisement
ಮನವೊಲಿಕೆ ಯತ್ನ: ಸದನದಲ್ಲಿ ಉಪ ಸಭಾಧ್ಯಕ್ಷರಂತಹ ಸಂವಿಧಾನಿಕ ಹುದ್ದೆಗಾಗಿ ಚುನಾವಣೆ ನಡೆಸುವುದು ಒಳ್ಳೆಯ ಸಂಪ್ರದಾಯವಲ್ಲ ಎನ್ನುವ ಕಾರಣಕ್ಕೆ ಕೃಷ್ಣಾರೆಡ್ಡಿ ಅವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸುವಂತೆ ಅವರ ಮನವೊಲಿಕೆಗೆ ಸಿಎಂ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ. ದೇವರಾಜ ಅರಸು ಅವರ ಕಾಲದಲ್ಲಿ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ಹಾಗೂ ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನವನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು.
ಆದರೆ, ಅವರ ಅಧಿಕಾರವಧಿ ನಂತರ ಆಡಳಿತ ಪಕ್ಷದವರೇ ಬಹುಮತದ ಆಧಾರದಲ್ಲಿ ಎರಡೂ ಸ್ಥಾನ ಪಡೆಯುವ ವ್ಯವಸ್ಥೆ ಮುಂದುವರಿದಿದೆ. ಈಗ ಕೃಷ್ಣಾರೆಡ್ಡಿ ಅವರ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಪತ್ರ ನೀಡಿದ್ದರೂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ವಿಷಯವನ್ನು ವಿಧಾನಸಭೆ ಕಲಾಪ ಕಾರ್ಯ ಸೂಚಿಯಲ್ಲಿ ಪ್ರಕಟಿಸಿ ಸದನದ ಗಮನಕ್ಕೆ ತಂದಾಗ ಅಧಿಕೃತವಾಗಿ ಪ್ರಕ್ರಿಯೆಗೆ ಚಾಲನೆ ದೊರೆತಂತಾಗುತ್ತದೆ.
ಆನಂದ ಮಾಮನಿ ಕಣ್ಣು: ಉಪ ಸಭಾಧ್ಯಕ್ಷ ಸ್ಥಾನದ ಮೇಲೆ ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಕಣ್ಣಿಟ್ಟಿದ್ದು, ಈ ಕುರಿತು ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಮುಖ್ಯಮಂತ್ರಿ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕರು ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡಿದ್ದರೂ, ವಿಧಾನಸಭೆ ಘನತೆ ಕಾಪಾಡಲು ಸ್ಪೀಕರ್ ಈ ವಿಷಯವನ್ನು ಸದನ ಸಲಹಾ ಸಮಿತಿಯಲ್ಲಿ ಚರ್ಚಿಸಿ ಸೌಹಾರ್ದಯುತವಾಗಿ ಇತ್ಯರ್ಥಗೊಳಿಸುವುದು ಸೂಕ್ತ. -ವಿ.ಆರ್.ಸುದರ್ಶನ್, ಮಾಜಿ ಸಭಾಪತಿ