Advertisement

ಕೆಶಿಪ್‌ ಎತ್ತಂಗಡಿ ಮಾಡಿದರೆ ಹೋರಾಟ: ಉಮೇಶ ಕತ್ತಿ

06:40 AM Aug 13, 2018 | Team Udayavani |

ಬೆಳಗಾವಿ: ಬೆಳಗಾವಿ ವಿಭಾಗದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಹೇಳಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಇದನ್ನು ಸಾಬೀತುಪಡಿಸಿ ತೋರಿಸಲಿ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಸವಾಲು ಹಾಕಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿಯಿಂದ ಕೆಶಿಪ್‌ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡಿರುವ ಸಚಿವ ರೇವಣ್ಣ ಅವರ ಕ್ರಮ ಸರಿಯಲ್ಲ. ಇದು ಸಮ್ಮಿಶ್ರ ಸರ್ಕಾರಕ್ಕೆ ಉತ್ತರ ಕರ್ನಾಟಕದ ಮೇಲೆ ಇರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಬೆಳಗಾವಿಯಿಂದ ಸ್ಥಳಾಂತರವಾಗಿರುವ ಕೆಶಿಪ್‌ ಕಚೇರಿಗಳನ್ನು ಕೂಡಲೇ ಇಲ್ಲಿ ಮುಂದುವರಿಸುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು. 

ಅಲ್ಲದೆ, ಮುಖ್ಯಮಂತ್ರಿಯವರು ಹೇಳಿದಂತೆ ಆದಷ್ಟು ಬೇಗ ಸುವರ್ಣ ವಿಧಾನಸೌಧಕ್ಕೆ ಸರ್ಕಾರದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದೇ ಕಾರಣಕ್ಕೆ ಮಠಾಧೀಶರು ಒಂದು ದಿನ ಸುವರ್ಣ ವಿಧಾನಸೌಧದ ಮುಂದೆ ಸಾಂಕೇತಿಕ ಧರಣಿ ನಡೆಸಿದರು. ಇಷ್ಟಾದ ಮೇಲೂ ಅನ್ಯಾಯ ಮುಂದುವರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಇದೇ ರೀತಿ ತಾರತಮ್ಯ ಧೋರಣೆ ಮುಂದುವರಿದರೆ ಹೋರಾಟ ಅನಿವಾರ್ಯ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದರು.

ಕೆಶಿಪ್‌ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಿರುವುದು ಸರಿಯಲ್ಲ.ಇದು ಲೋಕೋಪ ಯೋಗಿ ಇಲಾಖೆ ಸಚಿವರ ತಪ್ಪು ನಿರ್ಧಾರ. ಈ ಭಾಗದ ಎಲ್ಲ ಶಾಸಕರು ಸಚಿವ ಎಚ್‌.ಡಿ.ರೇವಣ್ಣ ಅವರೊಂದಿಗೆ ಚರ್ಚಿಸಿ ಈ ಕಚೇರಿಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
– ರಮೇಶ ಜಾರಕಿಹೊಳಿ, ಸಚಿವ

ಕೆಲವು ಇಲಾಖೆಗಳಲ್ಲಿ ಕಾಮಗಾರಿಗಳು ಮುಗಿದ ಮೇಲೆ ಅದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಆಯಾ ಇಲಾಖೆಯವರು ತೆಗೆದುಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿದ್ದ ಕೆಶಿಪ್‌ ಸೇರಿ ಇತರ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಗೊತ್ತು. ಅವರನ್ನೇ ಕೇಳಬೇಕು. ಅಂತಹ ತೀರ್ಮಾನ ಕೈಗೊಳ್ಳುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next