ಶಾಮ್ಲಿ : ‘ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ನಾನು ಗೆದ್ದರೆ ಕೈರಾನಾ, ದೇವಬಂದ್ ಮತ್ತು ಮೊರಾದಾಬಾದ್‌ನಲ್ಲಿ ಕರ್ಫ್ಯೂ ವಿಧಿಸಲಾಗುವುದು’ ಎಂದು ಹೇಳುವ ಮೂಲಕ ಭಾರತೀಯ ಜನತಾ ಪಕ್ಷದ ಶಾಸಕ ಸುರೇಶ್ ರಾಣಾ ಅವರು ಗಂಭೀರ ವಿವಾದವನ್ನು ಸೃಷ್ಟಿಸಿದ್ದಾರೆ.
ಮುಜಫರನಗರ ದೊಂಬಿ ಪ್ರಕರಣದಲ್ಲಿ ಓರ್ವ ಆರೋಪಿಯಾಗಿರುವ ರಾಣಾ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನಿನ್ನೆ ಭಾನುವಾರ ಶಾಮ್ಲಿಯ ಥಾಣಾ ಭವನ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕ ಭಾಷಣ ಮಾಡಿದ ಸಂದರ್ಭದಲ್ಲಿ ನೀಡಿದರು.
ತನ್ನ ಹೇಳಿಕೆಯು ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಗುರಿಯಾಗುವುದನ್ನು ಕಾಣುತ್ತಲೇ ರಾಣಾ ಅವರು “ನಾನು ಹೇಳಿದ್ದು ಕೈರಾನಾ ಮತ್ತಿತರ ಸ್ಥಳಗಳಿಂದ ಅಮಾಯಕ ಜನರು ಗುಳೇ ಹೋಗುವುದಕ್ಕೆ ಕಾರಣರಾದ ಗೂಂಡಾಗಳು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ, ಬಲವಂತದಿಂದ ಜಾಗ ಖಾಲಿ ಮಾಡಬೇಕಾದೀತು ಎಂಬ ಅರ್ಥದಲ್ಲೇ ವಿನಾ ಆ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗುವುದು ಎಂಬ ಅರ್ಥದಲ್ಲಿ ಅಲ್ಲ’ ಎಂದು ಸ್ಪಷ್ಟನೆ ನೀಡಿದರು.
ಗೂಂಡಾಗಳಿಗೆ ಪ್ರೋತ್ಸಾಹ, ಆಸರೆ ಮತ್ತು ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷದಿಂದಾಗಿ ಅಮಾಯಕ ಜನರು ಕೈರಾನಾದಂತಹ ಪ್ರದೇಶಗಳಿಂದ ವಲಸೆ ಹೋಗುವ ಅನಿವಾರ್ಯತೆ ಒದಗಿದೆ ಎಂದು ರಾಣಾ ಹೇಳಿದರು.
ಕೈರಾನಾದಲ್ಲಿ ಗೂಂಡಾಗಳಿಂದ ಬೆದರಿಕೆ ವಸೂಲಿ ಪ್ರಕರಣಗಳು ಹಾಗೂ ಹಿಂಸಾತ್ಮಕ ದಾಳಿ ಪ್ರಕರಣಗಳು ನಡೆದ ಪರಿಣಾಮವಾಗಿ 300ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಇಲ್ಲಿಂದ ವಲಸೆ ಹೋಗಿರುವುದಾಗಿ ಕಳೆದ ವರ್ಷ ಬಿಜೆಪಿ ಸಂಸದ ಹುಕುಂ ಸಿಂಗ್ ಹೇಳಿರುವುದು ರಾಷ್ಟ್ರ ಮಟ್ಟದಲ್ಲಿ ಭಾರೀ ದೊಡ್ಡ ಸುದ್ದಿಯಾಗಿತ್ತು.