Advertisement

ಮತ್ತೆ ಡಿಸಿಎಂ ಭೇಟಿಯಾದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌

09:45 PM May 24, 2024 | Team Udayavani |

ಬೆಂಗಳೂರು: ಅಲ್ಪಾವಧಿಯಲ್ಲಿ ಸತತ ಎರಡನೇ ಬಾರಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

Advertisement

ಈ ಹಿಂದೆ ಮೂರು ಶಿಕ್ಷಕರು ಮತ್ತು ಮೂರು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಶಿವರಾಂ ಹೆಬ್ಬಾರ್‌ ಅವರು ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಈಗ ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಮತ್ತೆ ಭೇಟಿ ನೀಡಿರುವುದು ಕಾಕತಾಳೀಯವಾಗಿದ್ದರೂ, ಹಲವು ರೀತಿಯ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಸದಾಶಿವ ನಗರದಲ್ಲಿರುವ ಡಿಸಿಎಂ ಮನೆಗೆ ಆಗಮಿಸಿದ್ದ ಶಿವರಾಂಹೆಬ್ಬಾರ್‌, ಪರಿಷತ್ತಿನ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಶಾಸಕರು, ಕ್ಷೇತ್ರದ ಕೆಲಸಕ್ಕೆ ಅಂತ ಪದೇಪದೆ ಬರುತ್ತೇನೆ. ಒಬ್ಬ ಶಾಸಕನಾಗಿ ಉಪಮುಖ್ಯಮಂತ್ರಿಯನ್ನು ಭೇಟಿಯಾಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ನೋಟಿಸ್‌ ಕೊಟ್ಟಿದ್ದಾರೆ. ಪಕ್ಷ ಕ್ರಮ ಕೈಗೊಂಡರೇ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ, ಕ್ರಮ ತೆಗೆದುಕೊಂಡಾಗ ಹೇಳುತ್ತೇನೆ ಎಂದಷ್ಟೇ ಹೇಳಿದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌, ಶಿವರಾಂ ಹೆಬ್ಬಾರ್‌ ನನ್ನ ಒಳ್ಳೆಯ ಗೆಳೆಯ. ಅವರು ಆಗಾಗ್ಗೆ ಭೇಟಿಯಾಗುತ್ತಲೇ ಇರುತ್ತಾರೆ ಎಂದು ಹೇಳಿದರು.
ಅಂದ ಹಾಗೆ, ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಗೈರುಹಾಜರಾಗಿದ್ದ ಶಿವರಾಂ ಹೆಬ್ಬಾರ್‌, ಬಳಿಕ ಪರಿಷತ್ತಿನ ಚುನಾವಣೆ ಚುರುಕುಗೊಂಡಾಗಲೇ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next