ಬೆಂಗಳೂರು: ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಅನುಸರಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಸ್ತಾನ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಬಿಜೆಪಿಯ ಈ ಷಡ್ಯಂತ್ರದಲ್ಲಿ ರಾಜಸ್ಥಾನದ ರಾಜ್ಯಪಾಲರೂ ಭಾಗಿಯಾಗಿದ್ದಾರೆ. ಸಚಿವ ಸಂಪುಟದ ತೀರ್ಮಾನದಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದರೆ, ಅವರು ಆ ಪಕ್ಷಕ್ಕೆ ಸಹಕಾರ ನೀಡಲು ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ರಾಜಸ್ಥಾನ ರಾಜ್ಯಪಾಲರು ಒಂದು ಕ್ಷಣವೂ ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು. ಬಿಜೆಪಿ ಸಂವಿಧಾನ ಬದ್ಧವಾದ ಎಲ್ಲ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳಳುತ್ತಿದೆ. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಕಚೇರಿಯೂ ಇದರಲ್ಲಿ ಸೇರಿದೆ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿಯವರು ಮಧ್ಯಪ್ರದೇಶ ಸರ್ಕಾರ ತೆಗೆದರು. ಇದೀಗ ರಾಜಸ್ಥಾನ ಸರ್ಕಾರ ತೆಗೆಯಲು ಹೊರಟಿದ್ದಾರೆ. ಅವರಿಗೆ ಕೋವಿಡ್ ಸಂಕಷ್ಟದ ಸಮಯ ಅನುಭವಕ್ಕೆ ಬಂದಿಲ್ಲವೇ? ಮಾನ, ಮರ್ಯಾದೆ, ನೈತಿಕತೆ ಕಿಂಚಿತ್ತಾದರೂ ಇದ್ದಿದ್ದರೆ ಬಿಜೆಪಿಯವರು ಈ ಕೆಲಸ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ: ಸಿದ್ದರಾಮಯ್ಯ, ಡಿಕೆಶಿ, ಖಂಡ್ರೆಯವರನ್ನು ವಶಕ್ಕೆ ಪಡೆದ ಪೊಲೀಸರು
ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ನಾವು ಯಾವುದೇ ಹಿಂಸಾತ್ಮಕವಾದ ಹೋರಾಟ ಮಾಡುತ್ತಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲಿ ಶಾಂತಿಯುವಾಗಿ ಅನ್ಯಾಯ ಪ್ರತಿಭಟಿಸಲು ಸಂವಿಧಾನ ಹಕ್ಕು ಕೊಟ್ಟಿದೆ ಎಂದು ಸಿದ್ದರಾಮಯ್ಯ ಹೇಳಿದರು.