Advertisement

ಈಶ್ವರಪ್ಪ ದೂರು ಪ್ರಕರಣ: ಸಿಎಂ ಬಿಎಸ್ ವೈ ಬೆನ್ನಿಗೆ ನಿಂತ ಬಿಜೆಪಿ ಸಚಿವರು, ಶಾಸಕರು!

02:27 PM Apr 01, 2021 | Team Udayavani |

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದಾರೆಂದು ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದ ಬೆನ್ನಲ್ಲೇ, ಸಂಪುಟದ ಸಚಿವರು ಮತ್ತು ಬಿಜೆಪಿ ಶಾಸಕರು ಸಿಎಂ ಬೆನ್ನಿಗೆ ನಿಂತಿದ್ದಾರೆ. ಏನೇ ಸಮಸ್ಯೆಗಳಿದ್ದರೂ ಚರ್ಚೆ ಮಾಡಬೇಕಿತ್ತು, ರಾಜ್ಯಪಾಲರಿಗೆ ದೂರು ನೀಡುವ ಅಗತ್ಯವೇನಿತ್ತು ಎಂದು ಈಶ್ವರಪ್ಪ ನಡೆಯನ್ನು ವಿರೋಧಿಸಿದ್ದಾರೆ.

Advertisement

ನಾವು 60 ಮಂದಿ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಿದ್ದರಿಂದ ಅವರು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ತಪ್ಪೇನು? ಅದಕ್ಕೂ ಮೊದಲು ಈಶ್ವರಪ್ಪನವರಿಗೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಆದರೆ ಅವರು ಸ್ಪಂದಿಸಿರಲಿಲ್ಲ.  ಹಾಗಾಗಿ ವಿಧಿಯಿಲ್ಲದೆ ಸಿಎಂರನ್ನು ಭೇಟಿ ಮಾಡಬೇಕಾಯ್ತು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಅದಲ್ಲದೆ ಸಿಎಂ ಗೆ ಮನವಿ ಮಾಡಿದ್ದ 48 ಶಾಸಕರ ಸಹಿ ಒಳಗೊಂಡ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಒಳ್ಳೆಯ ಸಂಸ್ಕೃತಿಯಲ್ಲ: ಅಶೋಕ್

ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ರಾಜ್ಯಪಾಲರಿಗೆ ಈಶ್ವರಪ್ಪ ಅವರು ದೂರು ಕೊಟ್ಟಿರುವುದು ಮಾಧ್ಯಮಗಳಲ್ಲಿ ನೋಡಿದ್ದೇನೆ . ನಾವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ನಂತರ ಅಧಿಕಾರಕ್ಕೆ ಬಂದಿದ್ದೇವೆ. ಪಕ್ಷದ ಆಂತರಿಕ ವಿಚಾರ ನಾಲ್ಕು ಗೋಡೆಗಳ ಮಧ್ಯೆ ಇರಬೇಕು. ಈ ಬೆಳವಣಿಗೆ ಒಳ್ಳೆಯದಲ್ಲ. ಶಾಸಕರು ಮನವಿ ಕೊಟ್ಟಿದ್ದಾರೆ. ಅದಲ್ಲದೆ ಅನುದಾನ ಬಿಡುಗಡೆಯಲ್ಲಿ ಮುಖ್ಯಮಂತ್ರಿ ಪರಮಾಧಿಕಾರ. ಸಿಎಂ ಜೊತೆಗೆ ಕೂತು ಮಾತಾಡಿಕೊಳ್ಳಬಹುದಿತ್ತು, ಇದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದಿದ್ದಾರೆ.

ಶೋಭೆಯಲ್ಲ: ಬಿ.ಸಿ.ಪಾಟೀಲ್

Advertisement

ಈಶ್ವರಪ್ಪ ಅವರು ಹಿರಿಯ ನಾಯಕರು. ರಾಜ್ಯಪಾಲರ ಅಂಗಳಕ್ಕೆ ತೆಗೆದುಕೊಂಡು ಹೋಗಿರುವುದು ಶೋಭೆಯಲ್ಲ. ಮುಖ್ಯಮಂತ್ರಿಯವರನ್ನು ಅಪರಾಧಿ ಸ್ಥಾನದಲ್ಲಿ ನೋಡುವವರಿಗೆ ಆಹಾರ ಮಾಡುವುದು ಬೇಡ. ಶಾಸಕರು ಅನುದಾನ ಕೇಳಿದ್ದಾರೆ ಅದಕ್ಕೆ ಅವರು ಹಣ ಬಿಡುಗಡೆ ಮಾಡಿದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದ್ದಾರೆ.

ಕೂತು ಚರ್ಚೆ ಮಾಡಿಕೊಳ್ಳಬೇಕು: ಬೊಮ್ಮಾಯಿ

ಬ್ಯುಸಿನೆಸ್ ಟ್ರ್ಯಾನ್ಸಾಕ್ಷನ್ ಮಾಡುವ ಅಧಿಕಾರ ಸಿಎಂಗಿದೆ. ಇದರ ಹಿನ್ನೆಲೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೋವಿಡ್, ನೆರೆ ಎಲ್ಲಾ ಬಂದಿತ್ತು. ಕೋವಿಡ್ ಸಂಧರ್ಭದಲ್ಲಿ ಹಣಕಾಸಿನ ತೊಂದರೆ ಇತ್ತು ಯಾವುದೇ ಸಹಾಯ ಮಾಡಲಾಗಿಲ್ಲ.  ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಿದ್ದಾರೆ. ಈಶ್ವರಪ್ಪ ಅವರ ಇಲಾಖೆಯಲ್ಲಿ ಆಕ್ಷೇಪ ಇದ್ದರೆ ಮುಖ್ಯಮಂತ್ರಿಗಳ ಜೊತೆಗೆ ಕೂತು ಚರ್ಚೆ ಮಾಡಿಕೊಳ್ಳಬೇಕು. ಈ ವಿಚಾರ ನಮ್ಮ ಸರ್ಕಾರದ ಒಳಗೆ ಚರ್ಚೆ ಮಾಡಿಕೊಳ್ಳಬೇಕು. ರಾಜ್ಯಪಾಲರ ಬಳಿ ಹೋಗುವ ಅವಶ್ಯಕತೆ ಇರಲಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಹೀಗೆ ಆಗಬಾರದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಯಡಿಯೂರಪ್ಪ ನಮ್ಮ ಅಗ್ರಮಾನ್ಯ ನಾಯಕ; ಸುಧಾಕರ್

ನಾವು ಎಲ್ಲಾ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರು. ಯಡಿಯೂರಪ್ಪ ಅವರು ನಮ್ಮ ಅಗ್ರಮಾನ್ಯ ನಾಯಕ. ಬಿಜೆಪಿ ಎಲ್ಲಾ ನಾಯಕರು ಸರ್ವಾನುಮತದಿಂದ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿ ಆ ಕುರ್ಚಿ ಮೇಲೆ ಕೂರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಯಾವುದೇ ಇಲಾಖೆಯ ಮಾಹಿತಿ ತರಿಸಿಕೊಳ್ಳಬಹುದು ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಇದು ಸರ್ಕಾರಕ್ಕೆ, ಪಕ್ಷಕ್ಕೆ, ವೈಯಕ್ತಿಕವಾಗಿ ಅವರಿಗೂ ಮುಜುಗರ ತರಿಸುವ ವಿಚಾರ. ಜನರಿಗೆ ಪರವಾಗಿ ಆಡಳಿತ ನೀಡುವ ಕಡೆ ನಾವು ಗಮನ ಕೊಡಬೇಕು.  ಇದೆಲ್ಲವನ್ನು ನೋಡಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.  ಬಹಿರಂಗ ಮಾಡಿ ನಮ್ಮನೇ ನಾವು ದುರ್ಬಲ ಮಾಡಿಕೊಳ್ಳಬಾರದು. ಮುಖ್ಯಮಂತ್ರಿ ಅವರನ್ನು ದುರ್ಬಲಗೊಳಿಸುವ ಉದ್ದೇಶ ಈಶ್ವರಪ್ಪನವರಿಗೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next