ರಾಯ್‌ಪುರ/ಹೊಸದಿಲ್ಲಿ: “500 ರೂ.ಗೆ ಅಡುಗೆ ಅನಿಲ ಸಿಲಿಂಡರ್, ಪ್ರತೀ ವರ್ಷ ವಿವಾಹಿತ ಮಹಿಳೆಯರಿಗೆ 12 ಸಾವಿರ ರೂ. ವಿತ್ತೀಯ ನೆರವು, ಸರಕಾರಿ ವೆಚ್ಚದಲ್ಲಿ ಅಯೋಧ್ಯೆ ಪ್ರವಾಸ, ಒಂದು ಲಕ್ಷ ಸರಕಾರಿ ಹುದ್ದೆಗಳ ಭರ್ತಿ..’ – ಇದು ನ.7, 17ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಗಢಕ್ಕೆ ಬಿಜೆಪಿ ನೀಡಿರುವ “ಸಂಕಲ್ಪ ಪತ್ರ’ (ಚುನಾವಣ ಪ್ರಣಾಳಿಕೆ)ಯ ಪ್ರಮುಖ ಅಂಶಗಳು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶುಕ್ರವಾರ ರಾಯ್‌ಪುರದಲ್ಲಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದರು. ಬಿಜೆಪಿಗೆ ಚುನಾವಣ ಪ್ರಣಾಳಿಕೆ ಎಂದರೆ ಕೇವಲ ಭರವಸೆ ನೀಡುವ ಮಾತುಗಳಲ್ಲ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸಂಕಲ್ಪವನ್ನೂ ಮಾಡುತ್ತೇವೆ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಏರಿದರೆ ಕೃಷಿ ಉನ್ನತಿ ಯೋಜನೆ ಜಾರಿ ಮಾಡುತ್ತೇವೆ. ಮುಂದಿನ 2 ವರ್ಷಗಳಲ್ಲಿ 1 ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ವಾಗ್ಧಾನ ಮಾಡಿದರು. ಇದಲ್ಲದೆ ಸರಕಾರಿ ವೆಚ್ಚದಲ್ಲಿ ಅಯೋಧ್ಯೆಗೆ ಪ್ರವಾಸ ಕೈಗೊಳ್ಳಲು ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜಾತಿಗಣತಿಗೆ ಆಕ್ಷೇಪ ಮಾಡಿಲ್ಲ: ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಟೀಕಿಸುವಂತೆ ಜಾತಿ ಗಣತಿಗೆ ಬಿಜೆಪಿ ಯಾವತ್ತೂ ವಿರೋಧ ಮಾಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಪ್ರತಿ ಯೊಬ್ಬರ ಜತೆಗೂ ಚರ್ಚೆ ಮಾಡಿದ ಬಳಿಕ ಈ ಬಗ್ಗೆ ಸೂಕ್ತ ಸಮಯದಲ್ಲಿ ಪಕ್ಷ ತೀರ್ಮಾನಿಸಲಿದೆ ಎಂದರು. ಕಾಂಗ್ರೆಸ್‌ನ ಜಾತಿಗಣತಿ ಸೇರಿದಂತೆ 17 ಚುನಾವಣ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಬಿಜೆಪಿ ರಾಷ್ಟ್ರೀಯ ಪಕ್ಷ. ಮತಗಳಿಕೆಯ ವಿಚಾರಕ್ಕಾಗಿ ಯಾವುದಕ್ಕೂ ರಾಜಕೀಯ ಸೇರಿಸುವುದಿಲ್ಲ’ ಎಂದರು.
ರಾಜಸ್ಥಾನದ 25 ಕಡೆಗಳಲ್ಲಿ ಇ.ಡಿ. ದಾಳಿ: ಜಲ ಜೀವನ ಯೋಜನೆ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಹಿರಿಯ ಐಎಎಸ್ ಅಧಿಕಾರಿಯ ನಿವಾಸ ಸೇರಿದಂತೆ ರಾಜಸ್ಥಾನದ 25 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ಶುಕ್ರವಾರ ದಾಳಿ ನಡೆಸಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟಂಬರ್‌ನಲ್ಲಿ ಇ.ಡಿ. ದಾಳಿ ನಡೆಸಿತ್ತು. ಚುನಾವಣೆ ಸಮೀಪಿಸುತ್ತಿರುವಾಗಲೇ ಈ ದಾಳಿಗಳು ಗಮನ ಸೆಳೆದಿವೆ.
ಸಂಕಲ್ಪ ಪತ್ರದ ಮುಖ್ಯಾಂಶಗಳು
-ವಿವಾಹಿತ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂ. ನೆರವು
-ಜಮೀನು ರಹಿತ ಕಾರ್ಮಿಕರಿಗೆ ವರ್ಷಕ್ಕೆ 10 ಸಾವಿರ ರೂ. ನೆರವು
-ಬಡ ಕುಟುಂಬಗಳಿಗೆ 500 ರೂ.ಗೆ. ಅಡುಗೆ ಅನಿಲ ಸಿಲಿಂಡರ್
-ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ಪ್ರಯಾಣದ ವೆಚ್ಚ ಖಾತೆಗೆ ವರ್ಗಾವಣೆ
-ಪ್ರತೀ ಮನೆಗೆ ಶುದ್ಧ ಕುಡಿಯುವ ನೀರು ಯೋಜನೆ ಸಂಪರ್ಕ
-ಮೊದಲ ಸಂಪುಟ ಸಭೆಯಲ್ಲಿ 18 ಲಕ್ಷ ಪ್ರಧಾನಮಂತ್ರಿ ಗೃಹ ನಿರ್ಮಾಣ ಯೋಜನೆಗೆ ಅನುಮೋದನೆ
-ಪ್ರತೀ ಕ್ವಿಂಟಾಲ್ ಭತ್ತ ಖರೀದಿಗೆ 3,200 ರೂ.
ಟೆಂಡು ಎಲೆಗೆ ಖರೀದಿಗೆ 5,500 ರೂ.
ಪ್ರಧಾನಮಂತ್ರಿ ಆರೋಗ್ಯ ಯೋಜನೆ ಮೊತ್ತ 10 ಲಕ್ಷ ರೂ.ಗೆ ಪರಿಷ್ಕರಣೆ
ಪ್ರಧಾನಿಯವರು ವಿನಾ ಕಾರಣ ನೆಹರೂ- ಗಾಂಧಿ ಕುಟುಂಬವನ್ನು ಗುರಿ ಮಾಡಿ, ಟೀಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಇನ್ನಿಲ್ಲದ ಸುಳ್ಳುಗಳನ್ನು ಹೇಳಲಾರಂಭಿಸಿದ್ದಾರೆ. 70 ವರ್ಷಗಳಲ್ಲಿ ಕಾಂಗ್ರೆಸ್ ದೇಶ ಕಟ್ಟುವ ಸಾಧನೆ ಮಾಡಿರದೇ ಇರುತ್ತಿದ್ದರೆ, ಮೋದಿ ಪ್ರಧಾನಿ, ಅಮಿತ್ ಶಾ ಗೃಹ ಸಚಿವರಾಗುತ್ತಿರಲಿಲ್ಲ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ