ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರ ಭರಾಟೆ ತೀವ್ರಗೊಳ್ಳುತ್ತಿದ್ದಂತೆ ಪಕ್ಷಾಂತರದ ಸದ್ದು ಕೇಳಿಬರಲಾಂಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಮಾಜಿ ಉಪಮೇಯರ್ ಎಂ.ಲಕ್ಷ್ಮೀನಾರಾಯಣ್ ಬಿಜೆಪಿ ತೊರೆದು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ದೀಪಾಂಜಲಿ ನಗರ ವಾರ್ಡ್ ಸೇರಿದಂತೆ ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲಕ್ಷ್ಮೀನಾರಾಯಣ್, ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿಯಿಂದ ಸ್ಥಳೀಯ ಬಿಜೆಪಿ ಮುಖಂಡರಲ್ಲಿ ತಳಮಳ ಸೃಷ್ಟಿಯಾಗಿದೆ.
ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಲಕ್ಷ್ಮೀ ನಾರಾಯಣ್ ನಡುವೆ ಶೀತಲ ಸಮರ ನಡೆದಿತ್ತು. ಕಳೆದ ಬಾರಿ ಚಾಮರಾಜಪೇಟೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮೀನಾರಾಯಣ್ ಅವರು ಈ ಬಾರಿಯೂ ಚಾಮರಾಜಪೇಟೆ ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೇ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು.
ವಿಜಯನಗರ ಭಾಗದಲ್ಲಿ ಮಾಜಿ ಪಾಲಿಕೆ ಸದಸ್ಯ ಎಚ್.ರವೀಂದ್ರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂಬ ಮಾತು ಮುಖಂಡರಿಂದ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಪಕ್ಷ ತೊರೆಯುತ್ತಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಆದರೂ ಚುನಾವಣೆ ಸಂದರ್ಭದಲ್ಲಿ ಮುಖಂಡರು ಪಕ್ಷ ತೊರೆದರೆ ಸಂಘಟನೆ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಂಘಟನೆಯನ್ನು ಬಲಪಡಿಸಿಕೊಂಡು ಬಿರುಸಿನ ಪ್ರಚಾರಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.