Advertisement

ಬಿಜೆಪಿ ಲೂಟಿ ಪಿತಾಮಹ: ಜೆಡಿಎಸ್

11:57 AM Mar 04, 2018 | |

ಬೆಂಗಳೂರು: ಐದು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಭಕ್ಷಿಸಿದ ಬಿಜೆಪಿ, ಈಗ ಬೆಂಗಳೂರು ರಕ್ಷಿಸಿ ಎಂದು ಪಾದಯಾತ್ರೆ ಹೊರಟಿರುವುದು ಹಾಸ್ಯಾಸ್ಪದ. ನಗರದಲ್ಲಿ ಲೂಟಿಯ ಪಿತಾಮಹ ಯಾರಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಜೆಡಿಎಸ್‌ ವಾಗ್ಧಾಳಿ ನಡೆಸಿದೆ.

Advertisement

ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ನಗರ ಜೆಡಿಎಸ್‌ ಅಧ್ಯಕ್ಷ ಆರ್‌.ಪ್ರಕಾಶ್‌, ಕಾರ್ಯಾಧ್ಯಕ್ಷ ಚಂದ್ರಶೇಖರ್‌, 3248 ಕೋಟಿ ರೂ. ನೈಟ್‌ ಟೆಂಡರ್‌ ಅವ್ಯವಹಾರ,

ಆರ್‌ಆರ್‌ನಗರ ಹಾಗೂ ಗಾಂಧಿನಗರ ಭಾಗದಲ್ಲಿ ಮೂರು ಸಾವಿರ ಕೋಟಿ ರೂ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗೆ ಬೆಂಕಿ, ಪಾಲಿಕೆ ಆಸ್ತಿ ಅಡಮಾನ ಇಟ್ಟು 8 ಸಾವಿರ ಕೋಟಿ ರೂ. ಸಾಲ ಪಡೆದ ಬಿಜೆಪಿ, ಇಂದು ಬೆಂಗಳೂರು ರಕ್ಷಿಸಿ ಎಂದು ಬೊಬ್ಬೆ ಹೊಡೆಯುತ್ತಿರುವುದು ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ ನಡೆಸಿರುವ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಜನಜಾಗೃತಿ ನಡೆಸಿ ಜೆಡಿಎಸ್‌ ಮಾ.6ರಿಂದ ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ ಜನಜಾಗೃತಿ ನಡೆಸಲಿದೆ ಎಂದು ಘೋಷಿಸಿದರು.

ಟಿ.ಎ.ಶರವಣ ಮಾತನಾಡಿ, ಬಿಜೆಪಿಗೆ ಬೆಂಗಳೂರಿನ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಬಿಬಿಎಂಪಿಯಲ್ಲಿ ಅವರು ಅಧಿಕಾರದಲ್ಲಿದ್ದಾಗ ಮಾಡಿದ್ದು ಹಗಲು ದರೋಡೆ. ಬಿಜೆಪಿ ಚಾರ್ಚ್‌ಶೀಟ್‌ನಲ್ಲಿ ಆರ್‌.ಆರ್‌.ನಗರ, ಗಾಂಧಿನಗರ ಅಕ್ರಮ, ನೈಟ್‌ ಟೆಂಡರ್‌, ಪಾಲಿಕೆ ಆಸ್ತಿ ಅಡಮಾನ ವಿಚಾರಗಳು ಏಕೆ ಸೇರಿಸಿಲ್ಲ. ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರು  ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

Advertisement

ಪಿ.ಜಿ.ಆರ್‌.ಸಿಂಧ್ಯಾ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಜನತಾಪರಿವಾರದ ನಾಯಕರಾದ ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌, ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿಯವರ ಕೊಡುಗೆ ಇದೆ. ಮತ್ತೆ ನೆಮ್ಮದಿಯ ಬೆಂಗಳೂರು ನಿರ್ಮಾಣಕ್ಕೆ ಜೆಡಿಎಸ್‌ ಬೆಂಬಲಿಸಲು ಕೋರಿ ನಗರಾದ್ಯಂತ ಪಾದಯಾತ್ರೆ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಕುಡಿಯುವ ನೀರು ಸಮಸ್ಯೆ ಉಂಟಾಗಲು ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತದ ವೈಫ‌ಲ್ಯ ಕಾರಣ ಎಂದು ಕುಪೇಂದ್ರರೆಡ್ಡಿ ದೂರಿದರು.

ಪ್ರಾದೇಶಿಕ ಪಕ್ಷ ಉಳಿಸಲು ಹೋರಾಟ: “ಪ್ರಾದೇಶಿಕ ಪಕ್ಷ ಉಳಿಸಲು ಈ ಇಳಿ ವಯಸ್ಸಿನಲ್ಲೂ ನಾನು ಹೋರಾಟ ಮಾಡಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್‌ ಅಲೆ ಇದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಹಲವಾರು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಎಲ್ಲರನ್ನೂ ಮನೆ ಮಕ್ಕಳಂತೆ ನೋಡಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ,’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ದಾಸರಹಳ್ಳಿಯಲ್ಲಿ ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ್‌ ಅವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಆವರು, ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೊಂದೇ ಪರಿಹಾರ ಎಂದು ಹೇಳಿದರು.

ಕಾವೇರಿ ವಿಚಾರದ ಬಗ್ಗೆ ಯಾರನ್ನೂ ನಾನು ದೂರುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ರಾಜ್ಯದ ಪರವಾಗಿ ಕೆಲಸ ಮಾಡಬೇಕು. ಈಗಾಗಲೇ ನೀರಾವರಿ ಸಚಿವರ ಜತೆ ಮಾತನಾಡಿದ್ದೇನೆ. ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳುನಾಡು ಕಡೆಯಿಂದಲೂ ಒತ್ತಡ ಇದೆ. ಎಲ್ಲರೂ ಪಕ್ಷ ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಶ್ರಮಿಸಬೇಕು. ಲಿಂಗಾಯಿತ  ಧರ್ಮದ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next