ಹೊಸದಿಲ್ಲಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮುಂದಿನ ಫೆಬ್ರವರಿ ಅಂತ್ಯದ ಹೊತ್ತಿಗೆ ಆಗಬಹುದು ಎಂದು ಪಕ್ಷದ ಮೂಲಗಳು ಹೇಳಿವೆ.
2020, ಫೆಬ್ರವರಿಯಲ್ಲಿ ಪಕ್ಷಾಧ್ಯಕ್ಷರಾಗಿ ಆಯ್ಕೆಯಾದ ಜಗತ್‌ಪ್ರಕಾಶ್ ನಡ್ಡಾ, ಪ್ರಸ್ತುತ ಕೇಂದ್ರ ಆರೋಗ್ಯ ಸಚಿವರೂ ಆಗಿದ್ದಾರೆ. ಅವರ ಅವಧಿ 3 ವರ್ಷವೇ ಆಗಿದ್ದರೂ, 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 1 ವರ್ಷ ವಿಸ್ತರಿಸಲಾಗಿತ್ತು.
ಬಿಜೆಪಿ ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ ಕನಿಷ್ಠ ಅರ್ಧದಷ್ಟು ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆಯಾಗಿರಬೇಕು. ರಾಜ್ಯ ಘಟಕಗಳ ಪದಾಧಿಕಾರಿಗಳ ಆಯ್ಕೆ ಚುನಾವಣೆ ಜನವರಿ ಮಧ್ಯಭಾಗದ ಹೊತ್ತಿಗೆ ಮುಗಿಯುವ ಸಾಧ್ಯತೆಯಿದೆ. ಅದಾದ ಅನಂತರ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯಲಿದೆ.
ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುತ್ತದೆಯೋ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೋ ಎಂದು ಮುಂದಷ್ಟೇ ಗೊತ್ತಾಗಬೇಕು. ಇಲ್ಲಿಯವರೆಗೆ ಬಹುತೇಕ ಅವಿರೋಧ ಆಯ್ಕೆಯೇ ನಡೆದಿದೆ. ಯಾರು ಅಧ್ಯಕ್ಷರಾಗಬಹುದೆನ್ನುವ ಸುಳಿವು ಇದುವರೆಗೆ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.