Advertisement

ಬಿಜೆಪಿ ಶಾಸಕಾಂಗ ಸಭೆ ಇಂದು

12:08 AM Jul 08, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌, ಜೆಡಿಎಸ್‌ನ 12 ಶಾಸಕರ ರಾಜೀನಾಮೆ ಜತೆಗೆ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆಂಬ ಮಾತುಗಳ ಬೆನ್ನಲ್ಲೇ ಬಿಜೆಪಿ ಸೋಮವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಬಳಿಕ ಶಾಸಕರನ್ನು ಯಲಹಂಕದ ಖಾಸಗಿ ಹೋಟೆಲ್‌ವೊಂದರಲ್ಲಿ ಇರಿಸುವ ಸಾಧ್ಯತೆಯಿದೆ.

Advertisement

ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ನಾಯಕರು ನಾನಾ ಕಾರ್ಯತಂತ್ರ ಹೆಣೆಯುತ್ತಿರುವ ಬೆನ್ನಲ್ಲೇ ಬಿಜೆಪಿ, ತನ್ನ ಶಾಸಕರನ್ನು ಒಟ್ಟಿಗೆ ಇಟ್ಟುಕೊಂಡು ಮುಂದಿನ ರಾಜಕೀಯ ಹೆಜ್ಜೆ ಇಡಲು ತೀರ್ಮಾನಿಸಿದೆ. ಆ ಮೂಲಕ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದನ್ನು ಸಾಬೀತುಪಡಿಸುವ ಯತ್ನ ಎಲ್ಲಿಯೂ ವಿಫ‌ಲವಾಗದಂತೆ ಯೋಜಿತ ರೀತಿಯಲ್ಲಿ ನಡೆಸಲು ಸಜ್ಜಾದಂತೆ ಕಾಣುತ್ತಿದೆ.

ದಿಢೀರ್‌ ರಾಜಕೀಯ ಬೆಳವಣಿಗೆ ನಡುವೆಯೇ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ತುಮಕೂರಿನ ಕೆಲವೆಡೆ ಬರ ಅಧ್ಯಯನ ಪ್ರವಾಸ ನಡೆಸಿದರು. ಭಾನುವಾರ ಸಂಜೆ ಹಿಂತಿರುಗಿದ ಯಡಿಯೂರಪ್ಪ ಅವರು ಸದಾಶಿವನಗರದ ಡಾಲರ್ ಕಾಲೋನಿಯ ತಮ್ಮ ನಿವಾಸಕ್ಕೆ ಆಗಮಿಸಿದ್ದ ಪಕ್ಷದ ಹಲವು ನಾಯಕರೊಂದಿಗೆ ಚರ್ಚಿಸಿದರು.

ಶಾಸಕಾಂಗ ಸಭೆ ಇಂದು: ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ 5 ಗಂಟೆಗೆ ಶಾಸಕಾಂಗ ಪಕ್ಷದಸಭೆ ಕರೆಯಲಾಗಿದೆ. ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ನಡೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.

ರೆಸಾರ್ಟ್‌ಗೆ ಬಿಜೆಪಿ ಶಾಸಕರು: ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರನ್ನು ಒಟ್ಟಿಗೆ ಒಂದೆಡೆ ಇರಿಸಿ ಒಗ್ಗಟ್ಟು ಕಾಯ್ದುಕೊಳ್ಳಲು ಚಿಂತಿಸಲಾಗಿದೆ. ಯಲಹಂಕ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶಾಸಕಾಂಗ ಸಭೆ ಬಳಿಕ ಶಾಸಕರನ್ನು ಹೋಟೆಲ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Advertisement

ಬೆಳವಣಿಗೆ ಮೇಲೆ ನಿಗಾ: ಕಾಂಗ್ರೆಸ್‌, ಜೆಡಿಎಸ್‌ನ 12 ಶಾಸಕರು ರಾಜೀನಾಮೆ ನೀಡಿ ನಂತರ ಮುಂಬೈಗೆ ತೆರಳಿರುವ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆ ನಾನಾ ತಿರುವು ಪಡೆಯುತ್ತಿದ್ದು, ಬಿಜೆಪಿ ನಾಯಕರು ಸೂಕ್ಷ್ಮವಾಗಿ ಇದನ್ನೆಲ್ಲಾ ಗಮನಿಸುತ್ತಾ ನಿಗಾ ವಹಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಹೊರತುಪಡಿಸಿ ಇತರ ಹಿರಿಯ ನಾಯಕರಾರೂ ಈ ಬೆಳವಣಿಗೆ ಬಗ್ಗೆ ಭಾನುವಾರ ಪ್ರತಿಕ್ರಿಯೆ ನೀಡಿದ್ದು ಕಂಡು ಬರಲಿಲ್ಲ. ಅಷ್ಟರ ಮಟ್ಟಿಗೆ ಬೆಳವಣಿಗೆಯಿಂದ ಅಂತರ ಕಾಯ್ದುಕೊಳ್ಳುವ ತಂತ್ರವನ್ನು ಬಿಜೆಪಿ ಮುಂದುವರಿಸಿದೆ.

ಸದ್ಯದಲ್ಲೇ ಮತ್ತಷ್ಟು ಶಾಸಕರ ರಾಜೀನಾಮೆ?: ಕಾಂಗ್ರೆಸ್‌, ಜೆಡಿಎಸ್‌ನ ಅತೃಪ್ತರೆನ್ನಲಾದ ಶಾಸಕರ ಪೈಕಿ 18 ಮಂದಿ ಬಿಜೆಪಿಯ ಕೆಲ ನಾಯಕರ ಸಂಪರ್ಕದಲ್ಲಿದ್ದರು. ಆ ಪೈಕಿ ಸದ್ಯ 12 ಮಂದಿ ರಾಜೀನಾಮೆ ನೀಡಿದಂತಿದೆ. ಉಳಿದವರು ಮಂಗಳವಾರ ಇಲ್ಲವೇ ಬುಧವಾರ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗುವುದರ ಜತೆಗೆ ಅದರಲ್ಲಿ ಸಚಿವರಿದ್ದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next