ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ (ಮಾರ್ಚ್ 02) ಬೆಳಗ್ಗೆ ಆರಂಭಗೊಂಡಿದ್ದು, ಆರಂಭಿಕ ಹಂತದ ಮತಎಣಿಕೆಯಲ್ಲಿ ಈಶಾನ್ಯದ ನಾಗಾಲ್ಯಾಂಡ್ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಗಳಿಸಿದೆ.
ಇದನ್ನೂ ಓದಿ:ಕೈಯಲ್ಲಿ ನಿತ್ಯಾನಂದನ ಟ್ಯಾಟೋ, ಮನದಲ್ಲಿ ನಿತ್ಯನ ಧ್ಯಾನ: ಯಾರು ಈಕೆ ವಿಜಯಪ್ರಿಯಾ?
ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೇಸ್ಸೀವ್ ಪಾರ್ಟಿ(ಎನ್ ಡಿಪಿಪಿ) ನೇತೃತ್ವದ ಮೈತ್ರಿಕೂಟ 60 ಸದಸ್ಯಬಲದ ವಿಧಾನಸಭೆಯಲ್ಲಿ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಧಿಕಾರದ ಗದ್ದುಗೆ ಏರಲು 31 ಸ್ಥಾನಗಳ ಅಗತ್ಯವಿದ್ದು, ಪ್ರಸ್ತುತ ಲೆಕ್ಕಾಚಾರದ ಪ್ರಕಾರ ಬಿಜೆಪಿ ಮೈತ್ರಿಕೂಟ ನಾಗಾಲ್ಯಾಂಡ್ ನಲ್ಲಿ ಪ್ರಚಂಡ ಜಯಗಳಿಸಿ ಗದ್ದುಗೆ ಏರಲು ಸಿದ್ದವಾಗಿದೆ.
ಮತಎಣಿಕೆ ಮುಂದುವರಿದಿದ್ದು, ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) ನಾಲ್ಕು ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಕೇವಲ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಎನ್ ಡಿಪಿಪಿ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ 20 ಸ್ಥಾನಗಳಲ್ಲಿ ಹಾಗೂ ಎನ್ ಡಿಪಿಪಿ 40 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.
ಮುಖ್ಯಮಂತ್ರಿ ನೆಫಿಯು ರಿಯೋ ನೇತೃತ್ವದ ಎನ್ ಡಿಪಿಪಿ ಪಕ್ಷವು 2018ರ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. 2018ರಲ್ಲಿ ಬಿಜೆಪಿ ಮೈತ್ರಿಕೂಟ 30 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಎನ್ ಪಿಎಫ್ 26 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು.
ನಾಗಾಲ್ಯಾಂಡ್ ನಲ್ಲಿ 2003ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಬಳಿಕ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿಯೂ ಗೆಲುವು ಸಾಧಿಸಿಲ್ಲವಾಗಿತ್ತು. ಈ ಬಾರಿ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ಎರಡು ದಶಕಗಳ ಬಳಿಕ ಕಾಂಗ್ರೆಸ್ ತನ್ನ ಖಾತೆ ತೆರೆದಂತಾಗಿದೆ.