ಉತ್ತರಕನ್ನಡ: ದೇವೇಂದ್ರ ಫಡ್ನವೀಸ್ ಅವರು ಕೇವಲ 80ಗಂಟೆಗಳ ಕಾಲ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು ಯಾಕೆ ಗೊತ್ತಾ? 40ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡುವ ಮುಖ್ಯ ಉದ್ದೇಶದಿಂದ ಎಂದು ಬಿಜೆಪಿ ಮುಖಂಡ ಅನಂತ್ ಕುಮಾರ್ ಹೆಗಡೆ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಅನಂತ್ ಕುಮಾರ್ ಹೆಗಡೆ ಸದ ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ. ಯಾವುದೇ ಬಹುಮತ ಸಂಖ್ಯಾಬಲ ಇಲ್ಲದಿದ್ದ ಮೇಲೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದೇಕೆ ಎಂದು ಪ್ರತಿಯೊಬ್ಬರು ಕೇಳುತ್ತಿದ್ದಾರೆ. ಹೀಗಾಗಿ ಈ ವಿವರಣೆ ನೀಡುತ್ತಿರುವುದಾಗಿ ಸಮಜಾಯಿಷಿ ನೀಡಿರುವುದಾಗಿ ವರದಿ ತಿಳಿಸಿದೆ.
“ನೂತನ ಮುಖ್ಯಮಂತ್ರಿ ಕೇಂದ್ರದಿಂದ ಬಂದಿದ್ದ ಸುಮಾರು 40 ಸಾವಿರ ಕೋಟಿ ರೂಪಾಯಿ ಹಣ ಬೊಕ್ಕಸದಲ್ಲಿತ್ತು. ಒಂದು ವೇಳೆ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನಾ ಸರ್ಕಾರ ರಚಿಸಿದರೆ ಅಭಿವೃದ್ಧಿ ಹೆಸರಿನಲ್ಲಿ ಈ 40 ಸಾವಿರ ಕೋಟಿ ರೂಪಾಯಿಯನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಫಡ್ನವೀಸ್ ಅಂದಾಜಿಸಿದ್ದರು. ಹೀಗಾಗಿ ಅವರು ನಾಟಕವಾಡಿದ್ದರು. ರಾತ್ರೋರಾತ್ರಿ ಬೆಳವಣಿಗೆಯಲ್ಲಿ ಫಡ್ನವೀಸ್ ಸಿಎಂ ಆಗಿದ್ದು 15ಗಂಟೆಯೊಳಗೆ 40 ಸಾವಿರ ಕೋಟಿ ಹಣವನ್ನು ಕೇಂದ್ರಕ್ಕೆ ವಾಪಸ್ ಮರಳಿಸಿದ್ದರು ಎಂದು ಹೆಗಡೆ ಹೇಳಿದ್ದರು.
ಹೆಗಡೆ ಉತ್ತರಕ್ಕೆ ಫಡ್ನವೀಸ್ ಹೇಳಿದ್ದೇನು ಗೊತ್ತಾ?
ಕೇವಲ 80ಗಂಟೆ ಕಾಲ ಮುಖ್ಯಮಂತ್ರಿಯಾಗಿದ್ದು 40 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ಎಂಬ ವಾದ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಫಡ್ನವೀಸ್. ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಪ್ರಮುಖ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. 40 ಸಾವಿರ ಕೋಟಿ ಹಣವನ್ನು ಕೇಂದ್ರಕ್ಕೆ ವರ್ಗಾಯಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.