Advertisement

ಬಿಜೆಪಿ ಬೆಳವಣಿಗೆ: ಅಂತರ ಕಾಯ್ದುಕೊಂಡ ವರಿಷ್ಠರು

12:35 AM Jan 18, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿಸಲು ರಾಜ್ಯ ಬಿಜೆಪಿ ನಾಯಕರು ನಡೆಸಿರುವ ಕಾರ್ಯಾಚರಣೆಯಿಂದ ಬಿಜೆಪಿ ವರಿಷ್ಠರು ಅಂತರ ಕಾಯ್ದುಕೊಂಡಂತಿದೆ. ರಾಜ್ಯ ನಾಯಕರ ಪ್ರಯತ್ನಕ್ಕೆ ಅಗತ್ಯ ಸಹಕಾರ, ನೆರವನ್ನು ತೆರೆಮರೆಯಲ್ಲಿ ಒದಗಿಸಿದಂತಿದ್ದರೂ ನೇರವಾಗಿ ವರಿಷ್ಠರು ಈ ಬೆಳವಣಿಗೆಯಲ್ಲಿ ಪಾತ್ರವಿಲ್ಲದಂತೆ ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಂತರದ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವುದು ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದೆ. ಇಷ್ಟಾದರೂ ಈವರೆಗೆ ಕೇಂದ್ರದ ಬಿಜೆಪಿಯ ಯಾವ ನಾಯಕರು ಈ ಬೆಳವಣಿಗೆ ಬಗ್ಗೆ ತುಟಿ ಬಿಚ್ಚದಿರುವುದು ವರಿಷ್ಠರು ಅಂತರ ಕಾಯ್ದುಕೊಂಡಿರುವುದನ್ನು ಖಾತರಿಪಡಿಸುವಂತಿದೆ. ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಪಕ್ಷದಲ್ಲೇ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ.

Advertisement

ಜ.11, 12ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ದೆಹಲಿಯಲ್ಲಿ ಆಯೋಜನೆಯಾಗಿತ್ತು. ರಾಜ್ಯದ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಇತರೆ ಆಯ್ದ ಅಪೇಕ್ಷಿತರಿಗೆ ಸಭೆಗೆ ಆಹ್ವಾನವಿತ್ತು. ಅದರಂತೆ ಬಿಜೆಪಿಯ ಬಹುತೇಕ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರ ಕಾರ್ಯಕಾರಿಣಿ ಸಭೆ ಮುಗಿಯಿತು. ಅಲ್ಲಿಯವರೆಗೆ ವರಿಷ್ಠರ ಸುಪರ್ದಿಯಲ್ಲೇ ಎಲ್ಲವೂ ನಡೆದಿತ್ತು. ಆನಂತರದ ಬೆಳವಣಿಗೆಗಳಿಂದ ವರಿಷ್ಠರು ಅಂತರ ಕಾಯ್ದುಕೊಂಡಂತಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಸಿದಟಛಿತಾ ಸಭೆಯನ್ನು ಜ.13ರಂದು ಬೆಳಗ್ಗೆ 9.30ಕ್ಕೆ ದೆಹಲಿಯ ಜನಪಥ್‌ನಲ್ಲಿರುವ ವೆಸ್ಟರ್ನ್ ಕೋರ್ಟ್‌ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾರ್ಗದರ್ಶನ ನೀಡಲಿದ್ದಾರೆ. ಆ ಸಭೆಗೆ ಎಲ್ಲ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಪಾಲ್ಗೊಳ್ಳಬೇಕು ಎಂಬ ಸೂಚನೆಯಿರುವ ಸಂದೇಶ ಯಡಿಯೂರಪ್ಪ ಅವರಿಂದ ರವಾನೆಯಾಗಿತ್ತು. ಆದರೆ ಆ ದಿನ ಬೆಳಗ್ಗೆ 9.30ಕ್ಕೆ ಸಭೆ ನಡೆಯಲಿಲ್ಲ. ಮಧ್ಯಾಹ್ನದ ವೇಳೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌ ಸಭೆ ಉದ್ಘಾಟಿಸಿ ಮಾತನಾಡಿದರು. ಬಳಿಕ ಜ.14ರಂದು ಸಭೆ ನಡೆಯಲಿದ್ದು, ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಅವರು ಪಾಲ್ಗೊಂಡಿರಲಿಲ್ಲ.

ಅಮಿತ್‌ ಶಾ ಸಭೆ ನಿಗದಿಯಾಗಿರಲಿಲ್ಲ?: ಜ. 13, 14ರಂದು ಅಮಿತ್‌ ಶಾ ಅವರ ಸಭೆ ನಿಗದಿಯಾಗಿರುವ ಬಗ್ಗೆಯೇ ಅನುಮಾನವಿದೆ. ಏಕೆಂದರೆ ಅವರಿಗೆ “ಜಡ್‌ ಪ್ಲಸ್‌’ ಭದ್ರತೆಯಿದ್ದು, ಅವರು ಸಾರ್ವಜನಿಕ ಸ್ಥಳದಲ್ಲಿ ಪಾಲ್ಗೊಳ್ಳುವ ಸಮಯಕ್ಕಿಂತ ಕೆಲವು ಗಂಟೆ ಮೊದಲೇ ಭದ್ರತಾ ಪಡೆಗಳು ಪರಿಶೀಲನೆ ನಡೆಸಿ ತಮ್ಮ ನಿಯಂತ್ರಣಕ್ಕೆ ಪಡೆಯಲಿವೆ. ಆದರೆ ಸಭೆ ನಿಗದಿಯಾಗಿದ್ದ ವೆಸ್ಟರ್ನ್ ಕೋರ್ಟ್‌ ಹೋಟೆಲ್‌ನಲ್ಲಿ ಆ ರೀತಿಯ ಯಾವುದೇ ಸಿದಟಛಿತೆ ಕಂಡುಬರಲಿಲ್ಲ. ಅಲ್ಲದೇ ಜ.13ರ ಸಭೆಗೆ ಬಾರದ ಅಮಿತ್‌ ಶಾ ಅವರು ಜ.14ರಂದು ಪಾಲ್ಗೊಳ್ಳುವುದಾಗಿ ನಾಯಕರು ಹೇಳಿದ್ದರು. ಆದರೆ ಶಾ ಅವರು ಭಾನುವಾರ ರಾತ್ರಿಯೇ ದೆಹಲಿ ತೊರೆದಿದ್ದು ನಂತರ ತಿಳಿಯಿತು ಎಂದು ಬಿಜೆಪಿ ಶಾಸಕರೊಬ್ಬರು ತಿಳಿಸಿದರು.

ನಂತರ ರಾಜ್ಯ ಬಿಜೆಪಿ ಶಾಸಕರನ್ನು ಗುರುಗ್ರಾಮದ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಯಿತು. ಕಳೆದ ಸೋಮವಾರ ದಿಂದ ಈವರೆಗೆ ಬಹುತೇಕ ಶಾಸಕರು ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಇಷ್ಟಾದರೂ ಯಾವುದೇ ಕೇಂದ್ರ ನಾಯಕರು ರೆಸಾರ್ಟ್‌ಗೆ ಭೇಟಿ ನೀಡಿದ್ದಾಗಲಿ, ಶಾಸಕರೊಂದಿಗೆ ಸಭೆ ನಡೆಸಿದ್ದಾಗಲಿ ಕಂಡುಬರಲಿಲ್ಲ. ಹಾಗೆಯೇ ಅತೃಪ್ತ ಶಾಸಕರು ತಂಗಿದ್ದಾರೆ ಎನ್ನಲಾದ ಮುಂಬೈನ ಖಾಸಗಿ ಹೋಟೆಲ್‌ನತ್ತಲೂ ಬಿಜೆಪಿ ರಾಷ್ಟ್ರೀಯ ನಾಯಕರು ಸುಳಿಯಲಿಲ್ಲ. ಇದು ಸಹ ಅಂತರಕಾಯ್ದುಕೊಳ್ಳುವ ಭಾಗವೇ ಆಗಿದೆ.

Advertisement

ರಾಜ್ಯ ಬಿಜೆಪಿ ಕಾರ್ಯತಂತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕಾಂಗ್ರೆಸ್‌ ನಾಯಕರು ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದರು. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಟ್ವೀಟ್‌ ವಾದ ಮಂಡಿಸಿದ್ದು, ಹೊರತುಪಡಿಸಿದರೆ ಬಿಜೆಪಿ ರಾಷ್ಟ್ರೀಯ ನಾಯಕರಾರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ.

ಜಾಣ್ಮೆಯ ನಡೆ?
ಮೈತ್ರಿ ಸರ್ಕಾರದ ಪಕ್ಷಗಳಲ್ಲಿ ಗೊಂದಲ, ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ರಾಜ್ಯ ನಾಯಕರು ನೀಡಿದ ಮಾಹಿತಿಯನ್ನು ಪರಾಮರ್ಶಿಸಿದ್ದ ವರಿಷ್ಠರು ಅವಕಾಶ ಸಿಕ್ಕರೆ ಸರ್ಕಾರ ರಚಿಸಲು ಹಸಿರು ನಿಶಾನೆ ತೋರಿದ್ದರು. ಈ ಬಗ್ಗೆ ತಮ್ಮದೇ ಆಪ್ತ ನಾಯಕರಿಂದಲೂ ಇದನ್ನು ಖಾತರಿಪಡಿಸಿಕೊಂಡಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರ ಕಾರ್ಯಾಚರಣೆಯಿಂದ ಅಂತರ ಕಾಯ್ದುಕೊಂಡರು. ಒಂದೊಮ್ಮೆ ಪ್ರಯತ್ನ ವಿಫ‌ಲವಾದರೆ ಬಿಜೆಪಿಗೆ ಮುಖಭಂಗವಾಗುವ ಜತೆಗೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಉಂಟಾಗುವ ಲೆಕ್ಕಾಚಾರದಿಂದ ವರಿಷ್ಠರು ಜಾಣ್ಮೆಯ ನಡೆ ಅನುಸರಿಸಿದಂತಿದೆ ಎನ್ನಲಾಗಿದೆ.

ಎಂ.ಕೀರ್ತಿ ಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next