Advertisement

ಬಿಜೆಪಿ ಭಿನ್ನಾಭಿಪ್ರಾಯ-ಗೊಂದಲಕ್ಕೆ ನಾಯಕರಿಂದ ಬ್ರೇಕ್‌

06:49 PM Dec 13, 2022 | Team Udayavani |

ಹೊಸದುರ್ಗ: ಕೆಲವು ದಿನಗಳಿಂದ ಬಿಜೆಪಿ ಮುಖಂಡರು ಮತ್ತು ಶಾಸಕರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಪಕ್ಷದ ನಾಯಕರು ಬ್ರೇಕ್‌ ಹಾಕಿದ್ದು, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತವಾಗಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದ್ದಾರೆ.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌, ಶಾಸಕ ಗೂಳಿಹಟ್ಟಿ ಡಿ. ಶೇಖರ್‌, ಮುಖಂಡ ಲಿಂಗಮೂರ್ತಿ ಮತ್ತಿತರರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸಭೆ ಸೇರಿ ಚರ್ಚಿಸಿದರು. ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗೊಂದಲ ಬಗೆಹರಿಸಿಕೊಂಡು ಪಕ್ಷದ ಶಿಸ್ತು, ಸಿದ್ಧಾಂತ ಪಾಲಿಸಿ ಚುನಾವಣೆ ಗೆಲುವಿಗೆ ದುಡಿಯಬೇಕುಎಂದು ಸೂಚನೆ ನೀಡಲಾಯಿತು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಪಕ್ಷ ಅ ಧಿಕಾರದಲ್ಲಿದ್ದು ಅಶಿಸ್ತನ್ನು ಸಹಿಸಲಾಗದು. ನಮ್ಮ ಒಳಜಗಳ ಮೂರನೆಯವರಿಗೆ ಆಹಾರವಾಗಬಾರದು. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪಕ್ಷದ ಚೌಕಟ್ಟಿನಲ್ಲಿ ಸಾಗಬೇಕು. ಮುಂದಿನ ನಾಲ್ಕೈದು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಪಕ್ಷವೇ ಎಲ್ಲವನ್ನೂ ನಿರ್ಧಾರ ಮಾಡಲಿದೆ.

ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಕಂಕಣಬದ್ಧರಾಗಿ ದುಡಿಯಬೇಕು. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಪಕ್ಷ ಸೂಚಿಸಿದಂತೆ ನಾವು ಕೆಲಸ ಮಾಡುತ್ತೇವೆ. ನನಗೆ ವಿಧಾನಪರಿಷತ್‌ ಚುನಾವಣೆಗೆ ನಿಲ್ಲಲು ಸೂಚಿಸಿದ್ದರಿಂದ ಸ್ಪರ್ಧಿಸಿದ್ದೆ. ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದರೆ ಪಕ್ಷದ ತೀರ್ಮಾನ ಪಾಲಿಸುತ್ತೇನೆ ಎಂದರು.

ಶಾಸಕ ಹಾಗೂ ರಾಜ್ಯ ಭೋವಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಡಿ. ಶೇಖರ್‌ ಮಾತನಾಡಿ, ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡು ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ. ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತೇವೆ.

Advertisement

ಹೊಸದುರ್ಗದಲ್ಲಿ ಕಮಲ ಅರಳಿಸಲು ಎಲ್ಲರೂ ಒಗ್ಗಟ್ಟಾಗಬೇಕು. ಕಾರ್ಯಕರ್ತರ ನಡುವೆ ಹುಳಿ ಹಿಂಡುವವರ ಬಗ್ಗೆ ಎಚ್ಚರದಿಂದಿರಬೇಕು. ನಮ್ಮನ್ನು ಗೆಲ್ಲಿಸಿದ ಸಾವಿರಾರು ಕಾರ್ಯಕರ್ತರು ಈಗಿನ ಗೊಂದಲಗಳಿಂದ ವಿಚಲಿತರಾಗುವುದು ಬೇಡ. ಪಕ್ಷದ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಂಡು ಗೆಲುವು ಸಾಧಿಸುವತ್ತ ಗಮನ ನೀಡಬೇಕು.

ಕಳೆದ ಲೋಕಸಭೆ, ಪುರಸಭೆ, ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ತಾಲೂಕಿನಲ್ಲಿ ಪ್ರಾಬಲ್ಯ ಸಾಧಿ ಸಿದೆ. ಮುಂದಿನ ಚುನಾವಣೆಗೆ ನನಗೆ ಬಿಜೆಪಿ ಟಿಕೆಟ್‌ ಕೊಡಬೇಕು. ನನ್ನನ್ನು ನಂಬಿದ ಸಾವಿರಾರು ಕಾರ್ಯಕರ್ತರಿದ್ದು, ಅವರಿಗೆ ನ್ಯಾಯ ಒದಗಿಸಿಕೊಡಬೇಕಾಗಿರುವುದು ನನ್ನ ಕರ್ತವ್ಯ. ಪಕ್ಷ ಅಭ್ಯರ್ಥಿಯಾಗಿಸಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ನಾನೊಬ್ಬನೇ ಸ್ವತಂತ್ರವಾಗಿ ಪಕ್ಷ ಸಂಘಟಿಸುತ್ತೇನೆ ಎಂದರು.

ವೀರಶೈವ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ಪಕ್ಷದ ಮುಖಂಡರ ನಡುವಿನ ಗೊಂದಲ ಕಾರ್ಯಕರ್ತರ ಮೇಲೆ ಪ್ರಭಾವ ಬೀರುವುದು ಬೇಡ. ಸಾವಿರಾರು ಕಾರ್ಯಕರ್ತರು ತನು-ಮನ-ಧನ ನೀಡಿ ಬೆಂಬಲಿಸಿದ ಪರಿಣಾಮ ಮೊದಲಿಗೆ ಹೊಸದುರ್ಗ ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಗೆಲುವಿನಲ್ಲಿ ಸಾವಿರಾರು ಜನರ ಪರಿಶ್ರಮವಿದೆ. ಪಕ್ಷ ಸಮೀಕ್ಷೆ ನಡೆಸಿ ಯಾರನ್ನೇ ಅಭ್ಯರ್ಥಿಯಾಗಿಸಿದರೂ ಅವರನ್ನು ಗೆಲ್ಲಿಸುವ ಗುರಿ ಕಾರ್ಯಕರ್ತರದ್ದಾಗಿದೆ ಎಂದರು.

ಜಿಪಂ ಮಾಜಿ ಸದಸ್ಯರಾದ ಹನುಮಂತಪ್ಪ, ಲಕ್ಷ್ಮಣ್‌, ಜಿಲ್ಲಾ ಉಪಾಧ್ಯಕ್ಷ ಕಲ್ಮಠ್, ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್‌, ರಂಗೇಶ್‌, ಹೆಬ್ಬಳ್ಳಿ ಮಲ್ಲಿಕಾರ್ಜುನ್‌, ಹೆಬ್ಬಳ್ಳಿ ಓಂಕಾರಪ್ಪ, ಕೋಡಿಹಳ್ಳಿ ತಮ್ಮಣ್ಣ, ಪುರಸಭೆ ಅಧ್ಯಕ್ಷ ಶ್ರೀನಿವಾಸ್‌, ತಾಲೂಕು ಬಿಜೆಪಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next