ಹಾವೇರಿ: “ಬಿಜೆಪಿಯವರು ಅನೈತಿಕ ಕೆಲಸದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಸಮರ್ಥವಾಗಿ ವಿರೋಧ ಪಕ್ಷದ ಸ್ಥಾನವನ್ನೂ ನಿರ್ವಹಿಸುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಂದ ಯಾವುದೇ ಒಳ್ಳೆಯ ಉದ್ದೇಶಕ್ಕಾಗಿ ಹೋರಾಟ ನಡೆಯುತ್ತಿಲ್ಲ. ಅವರಿಗೆ ನೀತಿ, ತತ್ವ ಏನೂ ಇಲ್ಲ. ಶಾಸಕರಿಗೆ ಆಮಿಷಯೊಡ್ಡುವುದು, ಕೆಲವರ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸುವುದು ಮಾಡುತ್ತಿದ್ದಾರೆ. ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ತಂದು ಮಹದಾಯಿ ವಿವಾದ ಬಗೆಹರಿಸುವುದಾಗಲಿ, ಬರಗಾಲ ಸಂದರ್ಭದಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ತರುವುದಾಗಲಿ, ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಕೊಡಗು ಜಿಲ್ಲೆಗೆ ಹೆಚ್ಚಿನ ಪರಿಹಾರಧನ ತರುವುದಕ್ಕಾಗಲಿ ಹೋರಾಟ ಮಾಡುತ್ತಿಲ್ಲ. ಬದಲಾಗಿ ಕೇವಲ ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದರು.
ಅಕ್ಕಿ ಕಡಿತ ನಿರ್ಣಯ ಆಗಿಲ್ಲ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸ್ಥಿರವಾಗಿದ್ದು ಇದನ್ನು ಅಭದ್ರಗೊಳಿಸಲು ಬಿಜೆಪಿಯವರು, ಕೆಲ ಮಾಧ್ಯಮದವರು ಹುಡುಕಾಡುತ್ತಿದ್ದಾರೆ. ಆದರೆ, ಅವರಿಗೆ ಏನೂ ಸಿಗುತ್ತಿಲ್ಲ. ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಇವತ್ತಿನ ಸರ್ಕಾರದ ನೀತಿಗಳಿಗೆ ನಾವು ಬದ್ಧರಾಗಬೇಕಿದೆ. ಇದಕ್ಕಾಗಿ ಸಮನ್ವಯ ಸಮಿತಿ ರಚಿಸಲಾಗಿದ್ದು ಯಾವುದೇ ವಿಚಾರವಿದ್ದರೂ ಅಲ್ಲಿ ಚರ್ಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅನ್ನಭಾಗ್ಯ ಯೋಜನೆಯಲ್ಲಿ ಪೂರೈಸುವ ಅಕ್ಕಿ ಪ್ರಮಾಣದ ಬಗ್ಗೆ ಮುಖ್ಯಮಂತ್ರಿಗಳು ಈವರೆಗೆ ಯಾವುದೇ ಆದೇಶ ಮಾಡಿಲ್ಲ. ಈ ಬಗ್ಗೆ ಸಮನ್ವಯ ಸಮಿತಿಯಲ್ಲಿಯೇ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸೆಪ್ಟೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಆಗ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆ ಸಂದರ್ಭದಲ್ಲಿ ಕೆಲವು ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ ಆದರೂ ಆಗಬಹುದು.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ