Advertisement

ಕಾಂಗ್ರೆಸ್‌ನ ವಿರೋಧ, ಟೀಕೆಗಳಿಂದ ಬಿಜೆಪಿ ಮತ್ತಷ್ಟು ಗಟ್ಟಿ: ಕೋಟ

07:50 AM Mar 26, 2018 | Team Udayavani |

ಕುಂದಾಪುರ: ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಕಂಟ್‌ಡೌನ್‌ ಆರಂಭವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮಾಡುತ್ತಿರುವ ಇಲ್ಲ-ಸಲ್ಲದ ಆರೋಪ, ಟೀಕೆಗಳಿಂದ ಪಕ್ಷ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಹೊರತು ಕುಗ್ಗುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ, ಉಡುಪಿ ಜಿಲ್ಲಾ ಬಿಜೆಪಿ ಚುನಾವಣಾ ಸಂಚಾಲಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು. 

Advertisement

ಅವರು ಕೋಟೇಶ್ವರದ ಸಹನಾ ಕನ್ವೆನ್ಶನ್‌ ಸೆಂಟರ್‌ನಲ್ಲಿ ರವಿವಾರ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಅನಂತರ ಹಿಂದೂಗಳ ಮೇಲೆ ದಬ್ಟಾಳಿಕೆ, ಕೊಲೆ, ದೌರ್ಜನ್ಯಗಳಾಗುತ್ತಿದ್ದು, ಇಂತಹ ಸರಕಾರ ಇನ್ನು ನಮಗೆ ಬೇಕಾ ಎಂದು ಜನ ತೀರ್ಮಾನಿಸಬೇಕು. ಬಿಜೆಪಿ ವ್ಯವಸ್ಥಿತವಾಗಿ ಸಂಘಟಿತರಾಗುತ್ತಿದ್ದು, ಚುನಾವಣೆಗೆ ಎಲ್ಲ ರೀತಿಯ ತಯಾರಿಗಳನ್ನು ಕ್ರಮಬದ್ಧವಾಗಿ ಮಾಡುತ್ತಿದೆ. ಖಾತೆಯೇ ತೆರೆಯದಿದ್ದ ತ್ರಿಪುರಾ, ನಾಗಲ್ಯಾಂಡ್‌ನ‌ಂತಹ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿದ್ದು, ಮುಂದೆ ಕರ್ನಾಟಕ ಮಾತ್ರವಲ್ಲ, ಮುಂದಿನ 2-3 ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆಯೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು, ನವಶಕ್ತಿ ಸಂಘಟನೆಯ ಮೂಲಕ ಆಯಾಯ ಬೂತ್‌ಗಳಲ್ಲಿ ಪಕ್ಷವನ್ನು ಗೆಲ್ಲಿಸುವತ್ತ ಯೋಚನೆ ಹಾಗೂ ಯೋಜನೆ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

“ಕಮಲ’ವನ್ನು ಗೆಲ್ಲಿಸಿ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಶಿಷ್ಟ ಸಂಕಲ್ಪ ಮಾಡಿದ್ದು , ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರೇರಣೆಯಂತೆ ಅಭ್ಯರ್ಥಿಗಿಂತ ಮುಖ್ಯವಾಗಿ ಪಕ್ಷದ ಚಿಹ್ನೆಯಾಗಿರುವ “ಕಮಲ’ವನ್ನು ಗೆಲ್ಲಿಸಿ ಕೊಡಲು ಈ ನವಶಕ್ತಿ ತಂಡ ಸನ್ನದ್ಧರಾಗುತ್ತಿದೆ. ತಳಮಟ್ಟದ ಬೇರುಗಳನ್ನು ಗಟ್ಟಿಮಾಡಿಕೊಳ್ಳುವುದರ ಜತೆಗೆ ಕಾರ್ಯಕರ್ತರು ಶಕ್ತಿಯುತರಾಗುವ ಮೂಲಕ ಗೆಲ್ಲುವತ್ತ ಚಿಂತನೆ ಮಾಡಬೇಕಿದೆ. ರಾಜ್ಯದ ಕಾಂಗ್ರೆಸ್‌ ಸರಕಾರ ಮತಬೇಟೆಗಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಸರಕಾರವನ್ನು ಕೆಳಗಿಳಿಸಲು ಬಿಜೆಪಿ ಕಾರ್ಯಕರ್ತರು ಈಗ ನಿರ್ಣಯ ಮಾಡಬೇಕು ಎಂದು ಕುಂದಾಪುರ ಕ್ಷೇತ್ರದ ಚುನಾವಣಾ ಪ್ರಭಾರಿ ಸುಲೋಚನಾ ಭಟ್‌ ಹೇಳಿದರು.

ಹಿರಿಯ ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌ ಅವರು ಪಕ್ಷದ ಕಾರ್ಯಕರ್ತರಿಗೆ ಕಾರ್ಯಾಗಾರ ರೂಪದಲ್ಲಿ ಮುಂದಿನ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಸಿದ್ಧರಾಗಬೇಕು, ಬೂತ್‌ ಮಟ್ಟದಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು. 

Advertisement

ಸಮಾವೇಶದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅನ್ಯ ರಾಜ್ಯದ ಉಸ್ತುವಾರಿ ಕೇರಳದ ಜೈಸ್‌ ಜಾನ್‌, ರಾಜ್ಯ ಕಾರ್ಯಕಾರಣಿ ಸದಸ್ಯ ಕಿರಣ್‌ ಕೊಡ್ಗಿ, ಜಿಲ್ಲಾ ಪ್ರ. ಕಾರ್ಯದರ್ಶಿ ನವೀನ್‌ ಶೆಟ್ಟಿ ಕುತ್ಯಾರು, ಕುಂದಾಪುರ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಾಣೂರು ನರಸಿಂಹ ಕಾಮತ್‌, ಪ್ರ. ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಮತ್ತಿತರ ಮುಖಂಡರು ಉಪಸ್ಥಿತರಿದ್ದರು. 

ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಶ್ರೀನಿವಾಸ ಶೆಟ್ಟಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

ಜಯಪ್ರಕಾಶ್‌ ಹೆಗ್ಡೆ ಗೈರು
ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟು ಆಕಾಂಕ್ಷಿ ಎನ್ನಲಾದ ಮಾಜಿ ಶಾಸಕ ಜಯಪ್ರಕಾಶ್‌ ಹೆಗ್ಡೆ ಅವರು ಗೈರಾಗಿರುವುದು ಅಚ್ಚರಿ ಮೂಡಿಸಿದೆ. ಅದಲ್ಲದೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ವಿರೋಧಿಸುವ ಬಣಗಳ ಪ್ರಮುಖರು ನವಶಕ್ತಿ ಸಮಾವೇಶಕ್ಕೆ ಬರದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಹಾಲಾಡಿ ಹೆಸರು ಪ್ರಸ್ತಾಪವಾದಗಲೆಲ್ಲ ಕಾರ್ಯಕರ್ತರಿಂದ ಜೈಕಾರದ ಘೋಷಣೆಗಳು ಮೊಳಗಿದವು.

2 ಸಾವಿರಕ್ಕೂ ಅಧಿಕ ಮಂದಿ ಭಾಗಿ
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು  215 ಬೂತ್‌ಗಳಿಂದ ತಲಾ 9 ಮಂದಿ ಕಾರ್ಯಕರ್ತರು ಭಾಗವಹಿಸಿದ್ದು, ಇವರಲ್ಲದೆ ಇನ್ನು ಅನೇಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. 215 ಬೂತ್‌ಗಳ ತಲಾ 9 ಮಂದಿಯಂತೆ 1,935 ಕಾರ್ಯಕರ್ತರು ಸೇರಿದಂತೆ ಒಟ್ಟು 2 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಗಳಾದರು.

Advertisement

Udayavani is now on Telegram. Click here to join our channel and stay updated with the latest news.

Next