ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕೊನೇ ಕ್ಷಣದಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಬದಲಾಗಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಹಾಲನೂರು ಎಸ್.ಲೇಪಾಕ್ಷಿ ಬದಲು ವೈ.ಎ.ನಾರಾಯಣಸ್ವಾಮಿ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರದಿಂದ ಜೆಡಿಎಸ್‌ನ ಶಿವರಾಮೇಗೌಡ ಬದಲು ಅಚ್ಚೇಗೌಡ ಶಿವಣ್ಣ ಕಣಕ್ಕಿಳಿದಿದ್ದಾರೆ. ಈ ಇಬ್ಬರೂ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಈ ಹಿಂದೆ ಬಿಜೆಪಿಯ ಹಾಲನೂರು ಎಸ್.ಲೇಪಾಕ್ಷಿ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಅದರಂತೆ ಅವರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಪ್ರಚಾರವನ್ನೂ ಕೈಗೊಂಡಿದ್ದರು. ಆದರೆ, ಸೋಮವಾರ ಬೆಳಗ್ಗೆ ಅವರ ಬದಲು ವೈ.ಎ.ನಾರಾಯಣಸ್ವಾಮಿ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ ಬಿಜೆಪಿ ಬಿ ಫಾರಂ ನೀಡಿದೆ.
ನಾರಾಯಣಸ್ವಾಮಿ ಅವರು ಈ ಹಿಂದೆ ಎರಡು ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದಿದ್ದರು. ನಂತರದಲ್ಲಿ ಹೆಬ್ಟಾಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್ ಬಾಬು ಗೆದ್ದಿದ್ದರು. ಇದೀಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಟಾಳ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ನಾರಾಯಣಸ್ವಾಮಿ ಸೋತಿದ್ದರು.
ಆದರೆ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಈಗಲೂ ಹಿಡಿತ ಹೊಂದಿರುವುದರಿಂದ ಮತ್ತು ಗೆಲ್ಲುವ ಅಭ್ಯರ್ಥಿ ಎಂಬ ಕಾರಣಕ್ಕೆ ಹಾಲನೂರು ಲೇಪಾಕ್ಷಿ ಬದಲು ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.
ಇನ್ನೊಂದೆಡೆ ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನು ಜೆಡಿಎಸ್ ಬದಲಾವಣೆ ಮಾಡಿದೆ. ಈ ಕ್ಷೇತ್ರಕ್ಕೆ ಶಿವರಾಮೇಗೌಡ ಮತ್ತು ಅಚ್ಚೇಗೌಡ ಶಿವಣ್ಣ ಅವರು ಆಕಾಂಕ್ಷಿಗಳಾಗಿದ್ದರೂ ಅಂತಿಮವಾಗಿ ಜೆಡಿಎಸ್ ಶಿವರಾಮೇಗೌಡರ ಹೆಸರನ್ನು ಹಿಂದೆ ಅಂತಿಮಗೊಳಿಸಿತ್ತು. ಅದರಂತೆ ಅವರು ಸ್ಪರ್ಧೆಗೆ ಸಿದ್ಧವಾಗಿದ್ದರು. ಆದರೆ, ಸೋಮವಾರ ಬೆಳಗ್ಗೆ ಶಿವರಾಮೇಗೌಡ ಬದಲು ಅಚ್ಚೇಗೌಡ ಶಿವಣ್ಣ ಅವರಿಗೆ ಜೆಡಿಎಸ್ ಬಿ ಫಾರಂ ನೀಡಿದೆ.
ಅಂತಿಮ ಕ್ಷಣದಲ್ಲಿ ಅಭ್ಯರ್ಥಿ ಬದಲಿಸಲು ಕಾರಣ ತಿಳಿದುಬಂದಿಲ್ಲ. ಆದರೆ, ದೇವೇಗೌಡರ ಸಮ್ಮುಖದಲ್ಲಿ ಶಿವರಾಮೇಗೌಡರ ಜತೆಗೆ ಚರ್ಚಿಸಿಯೇ ನನ್ನನ್ನು ಅಯ್ಕೆ ಮಾಡಲಾಯಿತು ಎಂದು ಅಚ್ಚೇಗೌಡ ಶಿವಣ್ಣ ಹೇಳಿದ್ದಾರೆ. ಅಲ್ಲದೆ, ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ಅ.ದೇವೇಗೌಡ ಅವರು ಸೋಮವಾರ ಮತ್ತೂಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.