Advertisement

MLAs ST Somashekar, ಹೆಬ್ಬಾರ್‌ಗೆ ಬಿಜೆಪಿ ನೋಟಿಸ್‌

12:34 AM Mar 03, 2024 | Team Udayavani |

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಹಾಗೂ ಮತದಾನಕ್ಕೆ ಗೈರಾದ ಶಿವರಾಂ ಹೆಬ್ಬಾರ್‌ಗೆ ರಾಜ್ಯ ಬಿಜೆಪಿಯಿಂದ ಕೊನೆಗೂ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಪಕ್ಷಾಂತರ ನಿಷೇಧ ಹಾಗೂ ಅನರ್ಹತೆ ಪ್ರಕರಣದಡಿ ನೋಟಿಸ್‌ ನೀಡಲಾಗಿದೆ. ಬಿಜೆಪಿಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ ಕಚೇರಿಯ ಮೂಲಕ ಈ ನೋಟಿಸ್‌ ಕೊಡಲಾಗಿದೆ.

Advertisement

ಇವರಿಬ್ಬರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಕ್ಕೆ ಬಿಜೆಪಿ ಆರಂಭದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ. ಆದರೆ ಹಿಮಾಚಲಪ್ರದೇಶದಲ್ಲಿ ಅಡ್ಡ ಮತದಾನ ಮಾಡಿದ ಶಾಸಕರನ್ನು ಕಾಂಗ್ರೆಸ್‌ ಅನರ್ಹಗೊಳಿಸಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ಎಚ್ಚೆತ್ತುಕೊಂಡಿದೆ. ಇವರಿಬ್ಬರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ ಯು.ಟಿ. ಖಾದರ್‌ಗೆ ಮನವಿ ಮಾಡಲು ನಿರ್ಧರಿಸಲಾಗಿದ್ದು, ಈ ಮೂಲಕ ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ನಡೆಸಲಾಗುತ್ತಿದೆ.

ಒಟ್ಟು ಮೂರು ಪುಟಗಳ ನೋಟಿಸ್‌ ನೀಡಿ ಐದು ದಿನಗಳೊಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಬಿಜೆಪಿಯಿಂದ ಆಯ್ಕೆಗೊಂಡ ನೀವು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿರುವುದು ಹಾಗೂ ಮತದಾನದಿಂದ ದೂರ ಉಳಿದು ಕಾಂಗ್ರೆಸ್‌ಗೆ ಸಹಕರಿಸಿರುವುದು ಪಕ್ಷಾಂತರ ನಿಷೇಧ ವ್ಯಾಪ್ತಿಗೆ ಬರುತ್ತದೆ. ಪಕ್ಷದ ಶಾಸಕಾಂಗ ಪಕ್ಷದ ಕಚೇರಿಯಿಂದ ನಿಮಗೆ ಅಧಿಕೃತವಾಗಿ ವಿಪ್‌ ನೀಡಲಾಗಿತ್ತು. ವಾಟ್ಸಾಪ್‌ ಮೂಲಕ ವಿಪ್‌ ಪ್ರತಿ ರವಾನೆ ಮಾಡಲಾಗಿತ್ತು. ಮತದಾನದ ದಿನ ನಿಮ್ಮನ್ನು ಸಂಪರ್ಕಿಸುವುದಕ್ಕೆ ಸತತ ಪ್ರಯತ್ನ ನಡೆಸಿದರೂ ಸ್ಪಂದಿಸಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವ ಉದ್ದೇಶ ನಿಮ್ಮ ನಡೆಯಲ್ಲಿ ಕಂಡುಬಂದಿದ್ದು, ಇದು ಶಾಸಕತ್ವದ ಅನರ್ಹತೆಗೆ ಸೂಕ್ತವಾದ ಪ್ರಕರಣವಾಗಿರುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ತಾಕತ್ತಿದ್ದರೆ ಕ್ರಮ ಕೈಗೊಳ್ಳಿ ಎಂದಿದ್ದರು
ತಾಕತ್ತಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಎಸ್‌.ಟಿ. ಸೋಮಶೇಖರ್‌ ಸವಾಲು ಹಾಕಿದ ಬಳಿಕ ಬಿಜೆಪಿ ಎಚ್ಚೆತ್ತುಕೊಂಡಿದ್ದು, ಈ ನೋಟಿಸ್‌ ನೀಡಲಾಗಿದೆ. ಆದರೆ ಈ ನೋಟಿಸ್‌ಗೆ ಇಬ್ಬರು ಶಾಸಕರು ನೀಡುವ ಉತ್ತರ, ಅದರ ಆಧಾರದ ಮೇಲೆ ಬಿಜೆಪಿ ಸ್ಪೀಕರ್‌ ನೀಡುವ ದೂರು ಮತ್ತೊಂದು ರಾಜಕೀಯ ಹೊಯ್‌-ಕೈಗೆ ಕಾರಣವಾಗುವ ನಿರೀಕ್ಷೆ ಇದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸೋಮಶೇಖರ್‌ ಹಾಗೂ ಹೆಬ್ಬಾರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಕಾರ್ಯಕರ್ತರ ಆಗ್ರಹವೂ ಆಗಿದೆ.ಅದಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯ. ಮುಂದಿನ ಕ್ರಮಗಳೇನೆಂಬುದು ಇನ್ನೆರಡು ದಿನದಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next