ಬೆಂಗಳೂರು: ಸರ್ ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಎಸ್. ರಘು ಪರ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.
ಹಳೇ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್‌ನಿಂದ ಬೈಯಪ್ಪನಹಳ್ಳಿ ಮಾರ್ಗವಾಗಿ ಸುದ್ದೆಗುಂಟೆಪಾಳ್ಯದಲ್ಲಿ ನಡೆದ ರೋಡ್ ಶೋ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಘು ಅಭಿವೃದ್ಧಿ ಪರ ಚಿಂತನೆಯುಳ್ಳ ನೈಜ ಜನಪರ ಶಾಸಕ. ಈ ಬಾರಿಯೂ ಆವರನ್ನು ಬಹುಮತದಿಂದ ಗೆಲ್ಲಿಸಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಘು ಅವರನ್ನು ಮಂತ್ರಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಂಸದ ಪಿ.ಸಿ.ಮೋಹನ್ ಹಾಗೂ ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಮುಖಂಡರು ರೋಡ್ ಶೋನಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ರಘು ಅವರು ಅಪಾರ ಕಾರ್ಯಕರ್ತರ ಜತೆಗೂಡಿ ಕ್ಷೇತ್ರದ ಕಗ್ಗದಾಸಪುರ, ಜೀವನಭೀಮಾನಗರ, ಇಂದಿರಾನಗರ ಹಾಗೂ ಸುತ್ತಮುತ್ತಲ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಭಾನುವಾರ ಹೊಯ್ಸಳನಗರ ವಾರ್ಡ್‌ನ ಸುಧಾಮನಗರದಲ್ಲಿ ಮತಯಾಚಿಸಿದ್ದ ರಘು ಅವರು, ಸೋಮವಾರ ಶ್ರೀಮುರುಘನ್, ಅಂಗಾಳ ಪರಮೇಶ್ವರಿ ಹಾಗೂ ಗಣೇಶ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಆನಂದಪುರ, ಜೀವನಭೀಮಾನಗರ, ಇಂದಿರಾನಗರ ಸೇರಿದಂತೆ ಇತರ ಬಡಾವಣೆಗಳ ಮನೆ, ಮನೆಗೆ ತೆರಳಿ ಮತಯಾಚಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರ: ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸರ್ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಎಸ್.ರಘು ಅವರು ವಿಶ್ವಾಸ ವ್ಯಕ್ತಪಡಿಸಿದರು.
“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಭಾರತವನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದ ರಘು, ಶಾಸಕನಾಗಿ ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಹಾಗೀ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯ ನಡೆಸಿರುವ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು. ಹಾಗೇ ಮುಂದಿನ ದಿನಗಳಲ್ಲಿ ಸಿ.ವಿ.ರಾಮನ್‌ನಗರವನ್ನು ಬೆಂಗಳೂರಿನ ಮಾದರಿ ನಗರವನ್ನಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.