Advertisement

ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ

12:20 PM May 13, 2022 | Team Udayavani |

ಹರಿಹರ: ಯಾರು ಏನೇ ಹೇಳಲಿ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ರಿಂದ 150 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ನಗರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಗುರುವಾರ ಮಾಜಿ ಶಾಸಕ ಬಿ.ಪಿ. ಹರೀಶ್‌ ಅಭಿಮಾನಿಗಳು ಹಮ್ಮಿಕೊಂಡಿದ್ದ ಹರೀಶ್‌ರವರ 62ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಅಭಿವೃದ್ಧಿ ಪರ ಪಕ್ಷವಾಗಿರುವುದರಿಂದಲೇ ಪಂಚರಾಜ್ಯಗಳ ಚುನಾವಣೆಯ ಗೆಲುವು ಸಾಧಿಸಿದೆ. ದೇಶಾದ್ಯಂತ ಪ್ರಬಲವಾಗಿ ಹೊರಹೊಮ್ಮುತ್ತಿದೆ ಎಂದರು.

ಹರಿಹರ ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಬಿ.ಪಿ. ಹರೀಶ್‌ ಪಾತ್ರ ದೊಡ್ಡದು. 2008ರಿಂದ 2013ರ ಅವಧಿಯ ಬಿಜೆಪಿ ಸರ್ಕಾರದ ಅವ ಧಿಯಲ್ಲಿ ಹರಿಇಶ್‌ ತಂದ ಸಾವಿರಾರು ಕೋಟಿ ಅನುದಾನದಿಂದ ತಾಲೂಕು ಅಭಿವೃದ್ಧಿ ಪರ್ವವನ್ನು ಕಂಡಿತ್ತು. ಬಿಜೆಪಿ ಶಾಸಕರು ಇಲ್ಲದ ಕಾರಣ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಗುರುತರವಾದ ಅಭಿವೃದ್ಧಿಯನ್ನು ತಾಲೂಕು ಕಂಡಿಲ್ಲ. ಕಳೆದೊಂದು ದಶಕದಿಂದ ಅಭಿವೃದ್ಧಿ ವಂಚಿತವಾಗಿರುವ ತಾಲೂಕಿನ ಅಭಿವೃದ್ಧಿಯಾಗಬೇಕಾದರೆ ಮತ್ತೆ ಇಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಬೇಕು ಎಂದು ಆಶಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಿಎಸ್‌ವೈ ಮತ್ತು ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ತತ್ವದಡಿ ಕಾರ್ಯ ನಿರ್ವಹಿಸುತ್ತಿದೆ. ಮತ್ತೆ ರಾಜ್ಯದಲ್ಲಿ ಹಾಗೂ ಹರಿಹರದಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಪ್ರತಿ ಹಳ್ಳಿ, ಪ್ರತಿ ಬೂತ್‌ಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಪಕ್ಷಕ್ಕೆ ಮತ್ತೆ ಪ್ರಚಂಡ ಬಹುಮತ ಬರುವಂತೆ ಗೆಲ್ಲಿಸಬೇಕಿದೆ. ಆದ್ದರಿಂದ ಮುಂದಿನ ಒಂದು ವರ್ಷ ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆಯ ಕಾಲವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು. ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ನವೀನ್‌ ಮಾತನಾಡಿ, ಸ್ಥಳೀಯ ಕಾರ್ಯಕರ್ತರು ಸಂಘಟಿತವಾಗಿ ಕಾರ್ಯ ನಿರ್ವಹಿಸಿದರೆ ಹರಿಹರ ಕ್ಷೇತ್ರ ಮತ್ತ ಬಿಜೆಪಿ ಮಡಿಲು ಸೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ನಾಗರಾಜ್‌ ಭಂಡಾರಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚಂದ್ರಪ್ಪ ಮತ್ತಿತರರು ಬಿಜೆಪಿ ಸೇರಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಗ್ರಾಮದೇವತೆ ದೇವಸ್ಥಾನದಿಂದ ಹೊರವಲಯದ ಸಿದ್ದೇಶ್ವರ ಪ್ಯಾಲೇಸ್‌ವರೆಗೆ ತೆರೆದ ವಾಹನದಲ್ಲಿ ವಾದ್ಯಮೇಳಗಳೊಂದಿಗೆ ಮುಖಂಡರ ಭವ್ಯ ಮೆರವಣಿಗೆ ನಡೆಸಲಾಯಿತು. ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನಮೂರ್ತಿ, ಪಕ್ಷದ ಹಾವೇರಿ ಜಿಲ್ಲಾ ಪ್ರಭಾರಿ ಎಲ್.ಎನ್. ಕಲ್ಲೇಶ್‌, ತಾಪಂ ಮಾಜಿ ಅಧ್ಯಕ್ಷ ಅಣ್ಣೇಶ್‌ ಐರಣಿ, ದೂಡಾ ಸದಸ್ಯ ಬಾತಿ ಚಂದ್ರಶೇಖರ್‌, ಮುಖಂಡರಾದ ಕುಣಿಬೆಳೆಕೆರೆ ದೇವೆಂದ್ರಪ್ಪ, ಎಚ್‌. ಶಿವಾನಂದಪ್ಪ, ಕೆ.ಎನ್. ನಾಗನಗೌಡ, ನಗರಸಭೆ ಸದಸ್ಯೆ ಅಶ್ವಿ‌ನಿ ಕೃಷ್ಣ ಇದ್ದರು.

ಹರೀಶ್‌ಗೆ ಬಿಜೆಪಿ ಟಿಕೆಟ್‌ ಸಿಕ್ಕೇ ಸಿಗುತ್ತೆ: ರೇಣುಕಾಚಾರ್ಯ

ತಾಲೂಕಿನಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್‌, ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಜನಸೇವೆ ಕೈಬಿಡದೆ ಜನಾನುರಾಗಿಯಾಗಿದ್ದಾರೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್‌ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ನಂತರ ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌, ಟಿಕೆಟ್‌ ಘೋಷಣೆ ಮಾಡಲು ಇವರೇನು ಪಕ್ಷದ ರಾಜ್ಯಾಧ್ಯಕ್ಷರೇ, ಇವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಸಿಡಿಮಿಡಿಗೊಂಡರು. ರೇಣುಕಾಚಾರ್ಯರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವಂತಹ ಕೆಲಸ ಯಾರೂ ಮಾಡಬಾರದು. ಈ ವಿಷಯವನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇನೆಂದರು.

Advertisement

Udayavani is now on Telegram. Click here to join our channel and stay updated with the latest news.

Next