Advertisement

BJP: ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸಿದ್ಧತೆ- ಹೊಸ ಮುಖಗಳಿಗೆ ಆದ್ಯತೆ ನಿರೀಕ್ಷೆ

06:03 PM Oct 14, 2023 | Team Udayavani |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸಿದ್ಧತೆ ಪ್ರಾರಂಭಿಸಿದೆ. ಮಾಜಿ ಸಚಿವ ಆರ್‌.ಅಶೋಕ್‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಹಾಲಿ ಸದಸ್ಯ ಅ.ದೇವೇಗೌಡ ಅವರಿಗೆ ಮೂರನೇ ಅವಧಿಗೆ ಟಿಕೆಟ್‌ ಲಭ್ಯವಾಗಲಿದೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.

Advertisement

ಬೆಂಗಳೂರು ಪದವಿಧರ, ಬೆಂಗಳೂರು ಶಿಕ್ಷಕ, ನೈಋತ್ಯ ಪದವೀಧರ, ದಕ್ಷಿಣ ಶಿಕ್ಷಕ ಕ್ಷೇತ್ರ ಸಹಿತ ವಿಧಾನ ಪರಿಷತ್‌ಗೆ ಚುನಾವಣೆಗೆ ಬಿಜೆಪಿ ಈಗಾಗಲೇ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಜನವರಿ ಮೊದಲ ವಾರದಲ್ಲಿ ಟಿಕೆಟ್‌ ಘೋಷಣೆಯಾಗುವ ನಿರೀಕ್ಷೆ ಇದೆ. ಒಟ್ಟು ಏಳು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿದ್ದು, 2024ರ ಜೂನ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವಾರು ಸಿದ್ಧತೆಗಳು ಪ್ರಾರಂಭವಾಗಿದೆ.

ಸದಸ್ಯರ ನೋಂದಣಿಗೆ ಟಾರ್ಗೆಟ್‌
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣ ಉಸ್ತುವಾರಿ ಆರ್‌.ಅಶೋಕ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಹಾಗೂ ಆಕಾಂಕ್ಷಿಗಳ ಜತೆಗೆ ಸಭೆ ನಡೆದಿದ್ದು, ಸದಸ್ಯರ ನೋಂದಣಿಗೆ “ಟಾರ್ಗೆಟ್‌’ ನಿಗದಿ ಮಾಡಲಾಗಿದೆ.

ಹೊಸ ಮುಖಗಳಿಗೆ ಆದ್ಯತೆ
ಬೆಂಗಳೂರು ಪದವೀಧರ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಕೆಲವು ದಶಕಗಳಿಂದ ಮಣೆ ಹಾಕಲಾಗುತ್ತಿದೆ. ಕಳೆದ ಎರಡು ಅವಧಿಗೆ ಅ.ದೇವೇಗೌಡ ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ರಾಮೋಜಿ ಗೌಡರನ್ನು ಕಣಕ್ಕಿಳಿಸಲಾಗಿತ್ತು. ಈ ಬಾರಿ ಬಿಜೆಪಿಯಿಂದ ಹೊಸ ಮುಖಕ್ಕೆ ಆದ್ಯತೆ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತಿದೆ.

ವಿನೋದ್‌ ಕೆ.ಗೌಡ, ಆನಂದ್‌ ಹೆಸರು ಪ್ರಸ್ತಾವ
ಆದಾಗಿಯೂ ದೇವೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಗುರುವಾರ ನಡೆದ ಸಭೆಗೆ ಅ.ದೇವೇಗೌಡ ಸಹಿತ ಐವರು ಆಕಾಂಕ್ಷಿಗಳು ಹಾಜರಾಗಿದ್ದರು. ಈ ಪೈಕಿ ಬಿಜೆಪಿ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಮಾಜಿ ಸಂಚಾಲಕ ಹಾಗೂ ಚುನಾವಣ ಸಮಿತಿ ಸದಸ್ಯ ವಿನೋದ್‌ ಕೆ.ಗೌಡ ಹಾಗೂ ಬಿಜೆಪಿ ಮಾಜಿ ಸಹ ವಕ್ತಾರ ಎ.ಎಚ್‌.ಆನಂದ್‌ ಹೆಸರು ಬಲವಾಗಿ ಕೇಳಿ ಬರುತ್ತಿದೆ.

Advertisement

ಹೊಸಬರ ನೋಂದಣಿ
ಬೆಂಗಳೂರಿನಲ್ಲಿ ಪದವೀಧರರ ಸಂಖ್ಯೆಗೂ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಗೂ ಅಜಗಜಾಂತರವಿದೆ. ಶಿಕ್ಷಕರು, ವಕೀಲರು, ಪತ್ರಕರ್ತರು, ಸರಕಾರಿ ನೌಕರರು ಸಹಿತ ಸಾಂಪ್ರದಾಯಿಕ ಮತದಾರರನ್ನು ಮಾತ್ರ ನಂಬಿಕೊಂಡು ಚುನಾವಣೆ ಎದುರಿಸಲಾಗುತ್ತಿದ್ದು, ಹೊಸ ಮತದಾರರನ್ನು ನೋಂದಣಿ ಮಾಡಿಸುವ ಪ್ರಯತ್ನವನ್ನು ವಿನೋದ್‌ ಕೆ.ಗೌಡ ಪ್ರಾರಂಭಿಸಿದ್ದಾರೆ.

ದೇವೇಗೌಡ ಪಟ್ಟು
ಸಾಮಾಜಿಕ ಜಾಲ ತಾಣ ಹಾಗೂ ನವಮಾಧ್ಯಮವನ್ನು ಬಳಸಿಕೊಂಡು ನೋಂದಣಿ ಕಾರ್ಯ ಆರಂಭಿಸಿದ್ದಾರೆ. ಆದರೆ ಈ ಬಾರಿ ತಮಗೆ ಕೊನೆಯ ಅವಕಾಶವಾಗಿ ಟಿಕೆಟ್‌ ನೀಡಲೇಬೇಕು ಎಂದು ಅ.ದೇವೇಗೌಡ ಪಟ್ಟು ಹಿಡಿದಿದ್ದು, ಹೊಸಬರಿಗೆ ಅವಕಾಶ ನೀಡಬೇಕೋ, ಬೇಡವೋ ಎಂಬುದನ್ನು ನೋಂದಣಿಯಲ್ಲಿ ಸಾಧಿಸುವ ಪ್ರಾಬಲ್ಯ ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಚುನಾವಣ ಉಸ್ತುವಾರಿಗಳ ನೇಮಕ
ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಬಿ.ಶ್ರೀರಾಮುಲು, ನೈಋತ್ಯ ಪದವೀಧರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಿ.ಟಿ.ರವಿ, ಆಗ್ನೇಯ ಶಿಕ್ಷಕ ಕ್ಷೇತ್ರಕ್ಕೆ ಡಿ.ವಿ.ಸದಾನಂದ ಗೌಡ, ದಕ್ಷಿಣ ಶಿಕ್ಷಕ ಕ್ಷೇತ್ರಕ್ಕೆ ಕೆ.ಎಸ್‌.ಈಶ್ವರಪ್ಪ ಹಾಗೂ ಬೆಂಗಳೂರು ಶಿಕ್ಷಕ ಕ್ಷೇತ್ರಕ್ಕೆ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಚುನಾವಣ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next