Advertisement

“ಬಿಜೆಪಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ’: ಶೋಭಾ ಕರಂದ್ಲಾಜೆ

06:45 AM May 04, 2019 | Team Udayavani |

ಬೆಂಗಳೂರು: “ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಯೂ ಇಲ್ಲ, ಆಕಾಂಕ್ಷಿಯೂ ನಾನಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

Advertisement

ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡ ಹತ್ತು ದಿನಗಳ ಕರಕುಶಲ ವಸ್ತುಗಳ ಪ್ರದರ್ಶನ “ಬೆಂಗಳೂರು ಉತ್ಸವ’ಕ್ಕೆ ಶುಕ್ರವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಜಾತಂತ್ರ ವ್ಯವಸ್ಥೆ ಅಡಿ ನಡೆಯುವ ಪಕ್ಷ ಬಿಜೆಪಿ. ಬದಲಾವಣೆ ಇಲ್ಲಿ ನಿರಂತರ ಪ್ರಕ್ರಿಯೆ.

ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ಎಲ್ಲ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಬದಲಾವಣೆ ಆಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷರಾಗಿದ್ದಾರೆ. ಈಗ ಮೂರು ವರ್ಷ ಅವಧಿ ಪೂರ್ಣಗೊಂಡಿದೆ’ ಎಂದು ಬದಲಾವಣೆಯ ಸುಳಿವು ನೀಡಿದರು.

“ಪ್ರಸ್ತುತ ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ಸಂಸದೆಯಾಗಿಯೂ 2 ಲಕ್ಷ ಮತಗಳ ಅಂತರದಿಂದ ಗೆದ್ದು ಬರುತ್ತೇನೆಂಬ ವಿಶ್ವಾಸವಿದೆ. ಇದರಲ್ಲೇ ನನಗೆ ತೃಪ್ತಿಯಿದೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಲ್ಲ; ಆಕಾಂಕ್ಷಿಯೂ ಅಲ್ಲ’ ಎಂದು ಪುನರುಚ್ಚರಿಸಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಪಕ್ಷದ ಹಿರಿಯರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.

ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ: ಮಂಡ್ಯದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಕಾಂಗ್ರೆಸ್‌ನ ಸ್ಥಳೀಯ ಬಂಡಾಯ ನಾಯಕರ ಸಭೆಯ ಬಗ್ಗೆ ಗಮನಸೆಳೆದಾಗ, “ಮಂಡ್ಯದಲ್ಲಿ ಸುಮಲತಾ ಅವರಿಗೆ ಕಾಂಗ್ರೆಸ್‌ ಬಂಡಾಯ ನಾಯಕರು ಬೆಂಬಲ ಕೊಟ್ಟಿದ್ದರೆ ಸಂತೋಷ.

Advertisement

ಆ ಮೂಲಕ ನಟ ಅಂಬರೀಶ್‌ ಅವರ ಕುಟುಂಬಕ್ಕೆ ಅಲ್ಲಿನ ನಾಯಕರು ಮತ್ತು ಜನ ನಿಜವಾದ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ಆದರೆ, ಇದು ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಲಿರುವ ಬಗ್ಗೆ ಈಗಲೇ ವಿಶ್ಲೇಷಣೆ ಮಾಡುವುದು ಸರಿಯಲ್ಲ. ಲೋಕಸಭಾ ಚುನಾವಣೆ ಫ‌ಲಿತಾಂಶದ ನಂತರ ಸ್ಪಷ್ಟವಾಗಲಿದೆ’ ಎಂದು ಹೇಳಿದರು.

“ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದಕ್ಕೆ ಹಲವು ಪುರಾವೆಗಳನ್ನು ಸ್ವತಃ ಸರ್ಕಾರ ರಚಿಸಿರುವ ಎರಡೂ ಪಕ್ಷಗಳೇ ನೀಡುತ್ತಿವೆ. ಕಾಂಗ್ರೆಸ್‌ನಲ್ಲಿಯ ಒಳಜಗಳ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಕಿತ್ತಾಟಗಳು, ಸರ್ಕಾರದ ಒಳಗೆ ನಡೆಯುತ್ತಿರುವ ಜಗಳಗಳೆಲ್ಲವೂ ಸಮ್ಮಿಶ್ರ ಸರ್ಕಾರ ತುಂಬಾ ದಿನ ಮುಂದುವರಿಯುವುದಿಲ್ಲ ಎಂಬುದನ್ನು ಒತ್ತಿಹೇಳುತ್ತಿವೆ’ ಎಂದರು.

ಡಿಸೆಂಬರ್‌ನಲ್ಲಿ ಕಣ್ಮರೆಯಾಗಿದ್ದ ಮೀನುಗಾರರ ದೋಣಿ ಸುವರ್ಣ ತ್ರಿಭುಜವನ್ನು ಪತ್ತೆಹಚ್ಚಿದ ನೌಕಾಪಡೆ ಕಾರ್ಯ ಶ್ಲಾಘನೀಯ. ಮಲ್ಪೆ ಮೀನುಗಾರರೊಂದಿಗೆ ತೆರಳಿ ಇದನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ವೈಯಕ್ತಿಕ ಆಸಕ್ತಿಯೂ ಕಾರಣ. ಘಟನೆಗೆ ಪ್ರಮುಖ ಕಾರಣವೇನು ಎಂಬುದರ ಬಗ್ಗೆಯೂ ತನಿಖೆ ಆಗಬೇಕು.
-ಶೋಭಾ ಕರಂದ್ಲಾಜೆ

Advertisement

Udayavani is now on Telegram. Click here to join our channel and stay updated with the latest news.

Next