ವಿಜಯಪುರ: ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರಲಾಗದ ಬಿಜೆಪಿ ಪಕ್ಷ ಆಪರೇಶನ್ ಕಮಲದ ಮೂಲದ ಅಧಿಕಾರಕ್ಕೇರುತ್ತಾರೆ. ನಾವು ಜನರ ವಿಶ್ವಾಸದಿಂದಲೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಪರೇಶನ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಆಪರೇಶನ್ ಬಿಟ್ಟರೆ ಅವರಿಗೆ ಬೇರೆ ಗೊತ್ತೇನಿದೆ ಎಂದು ಕುಟುಕಿದರು.
ಆಪರೇಶನ್ ಎಂದರೇನು ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜನರ ವಿಶ್ವಾಸ ಗಳಿಸುವುದು ಗೊತ್ತಿಲ್ಲದ ಬಿಜೆಪಿ ಈ ಹಿಂದೆ ಎರಡು ಬಾರಿ ಆಪರೇಶನ್ ಮೂಲಕವೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪೂರ್ಣ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. 2013, 2023 ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ನಾವು ಬಹುಮತದ ಸರ್ಕಾರ ರಚಿಸುತ್ತೇವೆ, ಅವರು ಆಪರೇಶನ್ ಮೂಲಕ ಅಧಿಕಾರಕ್ಕೆ ಬರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ 143 ಕೋಟಿ ಭಾರತೀಯರ ಭಾವನೆಯಂತೆ ರಾಷ್ಟ್ರಧ್ವಜಕ್ಕೆ ಸದಾ ಗೌರವ ಕೊಡುತ್ತದೆ. ಆದರೆ ಮಂಡ್ಯದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸುವುದಾಗಿ ಹೇಳಿ ಭಗವಾಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲಾಗದ ಅವರು ಭಾರತೀಯರ ಆಸ್ಮಿತೆ ರಾಷ್ಟ್ರಧ್ವಜ, ಅದನ್ನೇ ಹಾರಿಸಬೇಡಿ ಎನ್ನುವ ಇವರು ಯಾವ ದೇಶಭಕ್ತರು ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಯಶಸ್ಸು ಪಡೆದಿವೆ. 1.17 ಕೋಟಿ ಮಹಿಳೆಯರಿಗೆ ಡಿಬಿಟಿ ಮೂಲಕ ಹಣ ಪಾವತಿಸಿದ್ದೇವೆ. ವಿಜಯಪುರ ಜಿಲ್ಲೆಯಲ್ಲೂ ಹೆಚ್ಚು ಫಲಾನುಭವಿಗಳು ಗ್ಯಾರಂಟಿ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.