ಹರಿಹರ: ಭಾರತೀಯ ಸಂಸ್ಕೃತಿಯಂತೆ ಮಹಿಳೆಯರನ್ನು ಗೌರವ ಭಾವದಿಂದ ಕಾಣುವುದಲ್ಲದೆ, ಅವರಿಗೆ ಹೆಚ್ಚಿನ ಆದ್ಯತೆ ನೀಡಿರುವ ಏಕೈಕ ಪಕ್ಷ ಬಿಜೆಪಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಹೇಳಿದರು. ನಗರದ ಕಾಟೆ ಭವನದಲ್ಲಿ ಶನಿವಾರ ನಡೆದ ನಗರ ಬಿಜೆಪಿ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಟಲ್‌ಬಿಹಾರಿ ವಾಜಪೇಯಿ ಮಹಿಳೆಯರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ ರೂಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ ಮಹಿಳಾಪರ ಯೋಜನೆಗಳ ಬಗ್ಗೆ ವಿದೇಶಿಗರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ರಚಿಸಿರುವ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಪಕ್ಷ ಅಭುತಪೂರ್ವ ಜಯ ಗಳಿಸಲು ಮಹಿಳೆಯರ ಬೆಂಬಲವೂ ಕಾರಣವಾಗಿದೆ ಎಂದರು. ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಎಷ್ಟು ಮುಖ್ಯವೋ ದೇಶದ ಅಭಿವೃದ್ಧಿಯಲ್ಲಿ ಅದಕ್ಕಿಂತ ಮಹತ್ವದ್ದಾಗಿದೆ. ಮಹಿಳೆಯರಿಗೆ ಸೂಕ್ತ ಶಿಕ್ಷಣ, ತರಬೇತಿ ನೀಡಿ, ಅವರನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗುವಂತೆ ಮಾಡುವುದು ಬಿಜೆಪಿ ಗುರಿಯಾಗಿದೆ.
ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಈ ದಿಸೆಯಲ್ಲಿ ಹೆಚ್ಚಿನ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಪಕ್ಷ ಬಲಪಡಿಸಲು ಆ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಕಾಲವನ್ನು ಕರ್ನಾಟಕದ ಮಟ್ಟಿಗೆ ಸುವರ್ಣಯುಗ ಎಂದೆ ಕರೆಯಬಹುದು, ರಾಜ್ಯಾದ್ಯಂತ ಅವರು ಸಾಹಸ್ರಾರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು.
ರೈತರು, ಕಾರ್ಮಿಕರು, ನೌಕರರು ಎಲ್ಲಾ ವರ್ಗದ ಜನರು ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಆದರೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಹಳಿ ತಪ್ಪಿದ ಆಡಳಿತದಲ್ಲಿ ಎಲ್ಲಾ ಜನರು ಸಂಕಷ್ಟ ಎದುರಿಸಬೇಕಾಗಿದೆ ಎಂದರು. ನಗರ ಬಿಜೆಪಿ ಮಹಿಳಾ ಮೋರ್ಚದ ನೂತನ ಅಧ್ಯಕ್ಷೆಯಾಗಿ ರೂಪಾ ಕಾಟೆ ಅಧಿಕಾರ ವಹಿಸಿಕೊಂಡರು.
ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯ್ಯಮ್ಮ, ನಗರಸಭೆ ಸದಸ್ಯರಾದ ಮಂಜುಳಮ್ಮ, ಅಂಬುಜಾ ರಾಜೋಳಿ, ರಾಜು ರೋಖಡೆ, ಮುಖಂಡರಾದ ಪ್ರಮಿಳಾ ನಲ್ಲೂರು, ಮೀರಾಭಟ್, ಮಾಲತೇಶ್ ಭಂಡಾರೆ, ಐರಿಣಿ ನಾಗರಾಜ್, ಪೂಜಾರ್ ಚಂದ್ರಶೇಖರ್, ಸುಮನ್ ಖಮಿತ್ಕರ್, ತುಳುಜಪ್ಪ ಭೂತೆ ಮತ್ತಿತರಿದ್ದರು.