Advertisement
ಮಾಂಡೋವಿ ನದಿಗೆ ಅಡ್ಡವಾಗಿ ಕಟ್ಟಿರುವ 5.1 ಕಿ.ಮೀ. ಉದ್ದದ ಕೇಬಲ್ ಸೇತುವೆಯ ಉದ್ಘಾಟನೆ ಭಾನುವಾರ ನೆರವೇರಿದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಲಾಗಿದೆ. ಇನ್ನು ಸೇತುವೆ ಉದ್ಘಾಟನೆ ವೇಳೆ, ಉರಿ ಚಿತ್ರದ ಖ್ಯಾತ ಸಂಭಾಷಣೆ “ಹೌ ಈಸ್ ದ ಜೋಷ್’ ಎಂದು ಕೇಳಿದ್ದ ಪಾರೀಕರ್ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿರುವ ಗೋವಾ ಕಾಂಗ್ರೆಸ್, “ಮೊದಲು ನೀವು ಹೋಶ್‌ಗೆ (ಪ್ರಜ್ಞಾವಸ್ಥೆಗೆ) ಬನ್ನಿ. ಆನಂತರ ಜೋಷ್ ಬಗ್ಗೆ (ಉತ್ಸಾಹ) ಮಾತನಾಡಿ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಾಲದ ಮೊತ್ತ ಏರುತ್ತಲೇ ಇದೆ. ಇನ್ನು, ಜನರಲ್ಲಿ ಉತ್ಸಾಹ ಹೇಗೆ ತಾನೇ ಬಂದೀತು” ಎಂದಿದೆ.
“ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟ ಕೆಲ ಮಹತ್ವದ ಕಡತಗಳ ಬಗ್ಗೆ ಬಹಿರಂಗಗೊಂಡಿದ್ದ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಗೋವಾ ಸಚಿವ ವಿಶ್ವಜಿತ್ ರಾಣೆ ಅವರದ್ದೇ ಆಗಿದ್ದು, ಇದು ಗೋವಾ ಮುಖ್ಯಮಂತ್ರಿ ಪಾರೀಕರ್ ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಹಿಡಿತ ಸಾಧಿಸಿರುವುದನ್ನು ಸಾಬೀತುಪಡಿಸುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜತೆಗೆ, “ಆಡಿಯೋ ಕ್ಲಿಪ್ ಬಹಿರಂಗವಾಗಿ 30 ದಿನ ಕಳೆದಿದ್ದರೂ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ’ ಎಂದಿದ್ದಾರೆ. ಇತ್ತೀಚೆಗೆ, ಅಜ್ಞಾತ ವ್ಯಕ್ತಿಯೊಂದಿಗಿನ ಫೋನ್ ಸಂಭಾಷಣೆಯಲ್ಲಿ ಗೋವಾದ ಸಚಿವ ವಿಶ್ವಜಿತ್ ರಾಣೆ ಅವರು, ರಫೇಲ್ ಒಪ್ಪಂದ ಕುರಿತ ಕೆಲ ಮಹತ್ವದ ಕಡತಗಳು ತಮ್ಮ ಭದ್ರತೆಯಲ್ಲಿ ಇರುವುದಾಗಿ ಪಾರೀಕರ್ ತಿಳಿಸಿರುವುದಾಗಿ ಹೇಳಿದ್ದರು. ಈ ಆಡಿಯೋ ಕ್ಲಿಪ್ ಬಹಿರಂಗವಾಗುತ್ತಲೇ ಈ ಧ್ವನಿ ತಮ್ಮದಲ್ಲ ಎಂದು ರಾಣೆ ತಿಳಿಸಿದ್ದರು.