Advertisement

BJP ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ: ವಿಜಯೇಂದ್ರ ವಿಶ್ವಾಸದ ನುಡಿಗಳು

03:57 PM Nov 15, 2023 | Team Udayavani |

ಬೆಂಗಳೂರು: ”ಕಾರ್ಯಕರ್ತರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ಹಿರಿಯರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಶ್ರಮವನ್ನು ಒಂದುಗೂಡಿಸಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ” ಎಂದು ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ಬಳಿಕ ಬಿ.ವೈ. ವಿಜಯೇಂದ್ರ ವಿಶ್ವಾಸದ ನುಡಿಗಳನ್ನಾಗಿದ್ದಾರೆ.

Advertisement

ಅಧಿಕಾರ ಸ್ವೀಕರಿಸಿದ ಬಳಿಕ ಬಿಜೆಪಿ ನಾಯಕರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ”ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರುಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಹಗಲುದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ, ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡೋಣ” ಎಂದು ಕಿಡಿ ಕಾರಿದರು.

ನಳಿನ್ ಕುಮಾರ್ ಕಟೀಲ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ ಈ ಅಮೃತ ಘಳಿಗೆಯಲ್ಲಿ ‘ಜನ ಸಂಘದ ದಿನಗಳು ತ್ಯಾಗ ಮೆರೆದ ಹಿರಿಯರು,ಪರಿಶ್ರಮದ ಕಾರ್ಯಕರ್ತರು ಕಣ್ಣ ಮುಂದೆ ಹಾದು ಹೋದರು’.ದಿಗ್ಗಜರು, ಪುಣ್ಯವಂತರು ಸೇವೆ ಸಲ್ಲಿಸಿದ ಸಾಲಿನಲ್ಲಿ ನಾನೂ ಸೇರ್ಪಡೆಯಾಗುವ ಸುಯೋಗ ಕಲ್ಪಿಸಿದ ಪಕ್ಷದ ವರಿಷ್ಠರ ತೀರ್ಮಾನ ನೆನೆದು ಭಾವುಕನಾದೆನು, ಒಬ್ಬ ಕಾರ್ಯಕರ್ತನಾಗಿ ಹೆಮ್ಮೆ ಎನಿಸಿತು, ಜವಾಬ್ದಾರಿ ಎಚ್ಚರಿಸಿತು.ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿ ‘ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ, ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಅಮಿತೋತ್ಸಾಹ ತುಂಬಿದೆ. ಪ್ರಧಾನಿ ನರೇಂದ್ರ ಮೋದಿ,ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ , ಗೃಹಸಚಿವರಾದ ಅಮಿತ್ ಶಾ ಹಾಗೂ ಪೂಜ್ಯ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ,
, ಪಕ್ಷದ ಹಿರಿಯರೆಲ್ಲರ ಆಶೀರ್ವಾದ, ಮಾರ್ಗದರ್ಶನ, ಸಹಕಾರದೊಂದಿಗೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ನವ ಚೈತನ್ಯ ತುಂಬಿ 2024ರ ಲೋಕಸಭಾ ಚುನಾವಣೆಯಲ್ಲಿ 2019 ರ ಚುನಾವಣೆಯ ಫಲಿತಾಂಶ ಮತ್ತೆ ಮರುಕಳಿಸಿ ಮಗದೊಮ್ಮೆ ಮೋದಿ ಜೀ ಪ್ರಧಾನಿಯಾಗಿ ಭಾರತ ಪ್ರಜ್ವಲಿಸಲು ‘ಕರುನಾಡ ಜಯದ ಕಿರೀಟ’ ಸಮರ್ಪಿಸಬೇಕೆಂದು ಛಲ ಹೊತ್ತ ಕಾರ್ಯಕರ್ತರ ಪಡೆಯೊಂದಿಗೆ ಸಂಕಲ್ಪ ತೊಟ್ಟಿರುವೆ. ಈ ನಿಟ್ಟಿನಲ್ಲಿ ರಾಜ್ಯದ ಸಮಸ್ತ ಜನತೆಯ ಕೃಪಾಶೀರ್ವಾದ ಬೇಡುವೆ” ಎಂದು ವಿಜಯೇಂದ್ರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ಸಾಹ ಹೆಚ್ಚಿಸಿದೆ
”ರಾಷ್ಟ್ರೀಯ ನಾಯಕರು ವಿಜಯೇಂದ್ರ ರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ ಮೇಲೆ ದೇವದುರ್ಲಭ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ” ಎಂದು ಸಮಾರಂಭದ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಶ್ರದ್ಧೆಯಿಂದ ದುಡಿದಿದ್ದೇನೆ
”ದೇಶದ ಅತಿದೊಡ್ಡ ಪಕ್ಷದ ರಾಜ್ಯಾಧ್ಯಕ್ಷನಾಗಿ ಈ 4 ವರ್ಷ 3 ತಿಂಗಳ ಅವಧಿಯಲ್ಲಿ ಮಾತೃಸಮಾನ ಪಕ್ಷದ ಸಂಘಟನೆಗಾಗಿ ಶ್ರದ್ಧೆಯಿಂದ ದುಡಿದಿದ್ದೇನೆ.ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ವಹಿಸಿದ ಪಕ್ಷದ ನಾಯಕರು, ಸಂಘಟನಾ ಕಾರ್ಯದಲ್ಲಿ ಹೆಗಲಿಗೆ ಹೆಗಲಾಗಿ ನಿಂತ ಪಕ್ಷದ ರಾಜ್ಯ ನಾಯಕರು, ದೇವದುರ್ಲಭ ಕಾರ್ಯಕರ್ತರಿಗೆ ನನ್ನ ವಂದನೆಗಳು” ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಪದಗ್ರಹಣ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ರಾಮಚಂದ್ರೇ ಗೌಡ, ಆರಗ ಜ್ಞಾನೇಂದ್ರ, ಮುನಿರತ್ನ, ಪ್ರಭು ಚೌಹಾಣ್​, ಸಂಸದ ಬಿ.ವೈ. ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಅಧಿಕಾರ ಸ್ವೀಕಾರಕ್ಕೂ ಬಿಜೆಪಿ ಕಚೇರಿಯಲ್ಲಿ ವಿವಿಧ ಹೋಮಗಳು ಮತ್ತು ಪೂಜೆಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next