ಮೂಲ್ಕಿ: ತೈಲ ಮತ್ತು ಅಡುಗೆ ಅನಿಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರಕಾರ ಈಗ ರೈತರ ಮೇಲೆ ಸವಾರಿ ಆರಂಭಿಸಿದೆ. ಇದು ಸರಕಾರಕ್ಕೆ ಕೊನೆಗಾಲವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದ ಅನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ವೇಳೆ ನಮ್ಮ ಸರಕಾರ ಇದ್ದಿದ್ದರೆ ಜನರ ಮೇಲೆ ಹೊರೆ ಮಾಡದೆ ಸಬ್ಸಿಡಿ ಕೊಟ್ಟು ರೂ. 350 ರೂ. ದರದಲ್ಲಿ ಸಿಲಿಂಡರ್ ಹಾಗೂ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಷ್ಟೊಂದು ಜಾಸ್ತಿ ಮಾಡದೆ ಅರ್ಧದಷ್ಟು ಬೆಲೆಯಲ್ಲಿ ಒದಗಿಸುವಲ್ಲಿ ಮುಂದಾಗುತ್ತಿದ್ದೆ ಎಂದ ಮೊಯ್ಲಿ ಅವರು ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿ ಜನರ ವಿಶ್ವಾಸ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ದೇಗುಲದ ಆಡಳಿತ ಮೊಕ್ತೇಸರ ಎನ್. ಎಸ್. ಮನೋಹರ್ ಶೆಟ್ಟಿ, ಸೀಮೆಯರಸರು ಹಾಗೂ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮೊಯ್ಲಿ ಅವರನ್ನು ಸ್ವಾಗತಿಸಿದರು.
ಇದನ್ನೂ ಓದಿ:‘ಎಲ್ಲಿ ಅವ ವಿಜಯ ಶಂಕರ್’: ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಗುಡುಗಿದ ಸಿದ್ದರಾಮಯ್ಯ
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ ಮೊಲಿ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ಸಮನ್ವಯಕಾರ ಎಚ್. ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮಾಜಿ ಕಾರ್ಪೋರೇಟರ್ ಡಿ. ಕೆ. ಅಶೋಕ್, ಮಂಜುನಾಥ ಕಂಬಾರ, ಪುಷ್ಪರಾಜ್ ಅಂಚನ್, ಅಬ್ದುಲ್ ಅಝೀಜ್, ಬೀಮಾ ಶಂಕರ್ ಆರ್. ಕೆ., ದಿನೇಶ್ ಬೆಳ್ಳಾಯಾರು ಇದ್ದರು.