ಮೈಸೂರು: ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರದ್ದು ಎನ್ನಲಾದ ಡೈರಿಯನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಪದಾಧಿಕಾರಿಗಳು ನಗರದ ಅಗ್ರಹಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ಮುಖಂಡರ ತೇಜೋವಧೆ ಮಾಡಿ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವ ಬಿಜೆಪಿ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
ಬಿಜೆಪಿ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರೂ ಸಹ ಕಪ್ಪ ನೀಡಿರುವ ಬಗ್ಗೆ ಮಾಹಿತಿಯಿದ್ದು, ಬಿಜೆಪಿಯ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯ್ ಮನೆಯಲ್ಲೂ ಡೈರಿ ದೊರೆತಿದೆ. ಹೀಗಾಗಿ ಪ್ರಧಾನಿ ಮೋದಿಯವರು ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಡೈರಿಯಲ್ಲಿನ ಸಂಕೇತಾಕ್ಷರಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಮೇಲೆ ಸವಾರಿ ಮಾಡಲು ಹೊರಟಿದ್ದ ಬಿಜೆಪಿ ನಾಯಕರ ಬಣ್ಣ ಲೆಹರ್ ಸಿಂಗ್ ಡೈರಿಯಿಂದ ಬಯ ಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ, ಲೆಹರ್ ಸಿಂಗ್ ಹಾಗೂ ಪ್ರಧಾನಿ ಮೋದಿಯವರಿಂದ ರಾಜೀನಾಮೆ ಕೊಡಿಸಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯ ರಘುರಾಜೇ ಅರಸ್, ಸಲೀಂ, ಪರಾನ್ ಆತಿಬ್, ಮಣಿಕಂಠ, ವಿನಯ್, ಸುಲೇಮಾನ್, ರಾಘವೇಂದ್ರ ಮೊದಲಾದವರು ಹಾಜರಿದ್ದರು.