Advertisement

ಬಿಜೆಪಿ ಮಾಜಿ, ಹಾಲಿ ಎಂಪಿ, ಎಂಎಲ್‌ಎಗಳ ಸಭೆ

06:40 AM Sep 16, 2017 | |

ಬೆಂಗಳೂರು: ಬಿಜೆಪಿಯ ಮಾಜಿ ಹಾಗೂ ಹಾಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರ ಸಭೆಯನ್ನು ಶನಿವಾರ ಶಿವಾನಂದ ವೃತ್ತದ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

Advertisement

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಮಾನವಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌  ಹಾಗೂ ಚುನಾವಣಾ ಸಹ ಉಸ್ತುವಾರಿ, ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ಗಣ್ಯರು ಭಾಗವಹಿಸಲಿದ್ದಾರೆ.

ವರದಿ ಸಂಗ್ರಹ:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಯನ್ನು ಸಭೆಯಲ್ಲಿ ಪಡೆಯಲಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಅವರು ಇತ್ತೀಚಿಗೆ ಕರ್ನಾಟಕ ಪ್ರವಾಸ ಮಾಡಿದ ಸಂದರ್ಭದಲ್ಲಿ ಶಾಸಕರಿಗೆ, ಸಂಸದರಿಗೆ ಒಂದು ಟಾಸ್ಕ್ ನೀಡಿದ್ದರು. ಸಂಸರು ಎರಡು ಲೋಕಸಭಾ ಕ್ಷೇತ್ರದಲ್ಲಿ, ಶಾಸಕರು ಎರಡು ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತು ವಿಧಾನ ಪರಿಷತ್‌ ಸದಸ್ಯರು ಒಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ತಾವು ಗೆಲ್ಲುವುದರ ಜತೆಗೆ ತಮ್ಮ ಸುತ್ತಲಿನ ಕ್ಷೇತ್ರವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದ್ದರು. ಈ ವಿಷಯ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ವಹಿಸಿಕೊಂಡಿದ್ದಾರೆ. ನಾನೇ ಅಭ್ಯರ್ಥಿ ಎಂಬಂತೆ ಕ್ಷೇತ್ರದಲ್ಲಿ ಬಿಂಬಿಸಿಕೊಳ್ಳುತ್ತಿರುವವರನ್ನು ಸೇರಿದಂತೆ ಪಕ್ಷದಿಂದ ಟಿಕೆಟ್‌ ಸಿಗದೇ ಇರುವವರನ್ನು ಈಗಿಂದಲೇ ಮನವೋಲಿಸುವ ನಿಟ್ಟಿನಲ್ಲಿ ಸಭೆ ಸಾಗಲಿದೆ. ಪಕ್ಷವನ್ನು ಗೆಲ್ಲಿಸುವುದೇ ಮೊದಲ ಆದ್ಯತೆ, ಪಕ್ಷ ಗೆದ್ದ ನಂತರ, ಟಿಕೆಟ್‌ ಕೈ ತಪ್ಪಿದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂಬ ವಿಷಯವಾಗಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮಹಿಳಾ ಕಾರ್ಯಕಾರಣಿ
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಣಿ ಸಭೆ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಸೆ.16ರ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿಜಯ ರಾಹಟ್ಕರ್‌ ಕಾರ್ಯಕಾರಣಿ ಉದ್ಘಾಟಿಸಲಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಸಚಿವ ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸೆ.16ರ ಬೆಳಗ್ಗೆ 11 ಗಂಟೆಗೆ ನಗರದ ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಲಿದ್ದು, ನಗರ ಅಧ್ಯಕ್ಷ ಪಿ.ಎನ್‌.ಸದಾಶಿವ, ನಗರ ಜಿಲ್ಲಾಧ್ಯಕ್ಷ ಎಸ್‌.ಮುನಿರಾಜು ಸೇರಿದಂತೆ ಬಿಜೆಪಿ ಶಾಸಕರು, ಸಂಸದರು, ಪಾಲಿಕೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next