Advertisement

ರಾಜ್ಯಸಭೆಗೆ ಬಿಜೆಪಿ ಅಚ್ಚರಿಯ ಆಯ್ಕೆ: ಪ್ರಕಾಶ್ ಶೆಟ್ಟಿ, ಕತ್ತಿ,ಕೋರೆ ಯಾರಿಗೂ ಇಲ್ಲ ಟಿಕೆಟ್!

04:24 PM Jun 08, 2020 | keerthan |

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಹೆಸರುಗಳನ್ನು ತಿರಸ್ಕರಿಸಿ ಇಬ್ಬರು ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

Advertisement

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ನೀಡಿದೆ.

ರಾಜ್ಯಸಭಾ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಕಂಡುಬಂದಿತ್ತು. ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡಬೇಕೆಂದು ಶಾಸಕ ಉಮೇಶ್ ಕತ್ತಿಯವರು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಿದ್ದರು. ಹಾಲಿ ರಾಜ್ಯಸಭಾ ಸಂಸದ ಪ್ರಭಾಕರ ಕೋರೆಯವರು ಕೂಡಾ ಪುನಾರಯ್ಕೆ ಬಯಸಿ ಟಿಕೆಟ್ ಆಕಾಂಕ್ಷೆ ಹೊಂದಿದ್ದರು.

ಕರಾವಳಿ ಕರ್ನಾಟಕದ ಹೋಟೆಲ್ ಉದ್ಯಮಿ ಕೆ ಪ್ರಕಾಶ್ ಶೆಟ್ಟಿಯವರ ಹೆಸರು ಕೂಡಾ ಕೊನೆಯ ಕ್ಷಣದಲ್ಲಿ ಕೇಳಿ ಬಂದಿತ್ತು. ಇವರೊಂದಿಗೆ ನಿರ್ಮಲ್ ಕುಮಾರ್ ಸುರಾನ ಹಾಗೂ ಡಾ.ಎಂ. ನಾಗರಾಜ್ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸು ಮಾಡಲಾಗಿತ್ತು.

Advertisement

ಆದರೆ ಸದ್ಯ ಬಿಜೆಪಿ ವರಿಷ್ಠರು ಈ ಮೂರು ಹೆಸರನ್ನು ಕೈಬಿಟ್ಟಿದ್ದು, ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ. ಅಶೋಕ್ ಗಸ್ತಿಯವರು ರಾಯಚೂರು ಜಿಲ್ಲೆಯವರಾಗಿದ್ದು, ಕಲ್ಯಾಣ ಕರ್ನಾಟಕ ವಿಭಾಗೀಯ ಪ್ರಭಾರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ವಿಭಾಗೀಯ ಪ್ರಭಾರಿಯಾಗಿರುವ ಈರಣ್ಣ ಕಡಾಡಿಯವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಪ್ರಭಾಕರ ಕೋರೆ, ರಮೇಶ್ ಕತ್ತಿ ಲಿಂಗಾಯತ ಸಮುದಾಯದವರಾಗಿದ್ದು ಬೆಳಗಾವಿ‌ ಮೂಲದವರಾಗಿದ್ದರು. ಆ ಇಬ್ಬರನ್ನೂ ಪರಿಗಣಿಸದೆ ಬೆಳಗಾವಿಯ ಹಾಗೂ ಲಿಂಗಾಯಿತ ಸಮುದಾಯದವರೇ ಆದ ಈರಣ್ಣ ಕಡಾಡಿ ಅವರನ್ನು ಆಯ್ಕೆ‌ಮಾಡಿರುವ ಮೂಲಕ‌ ಸಂಘಟನೆ ಮೂಲದವರಿಗೆ ಆದ್ಯತೆ ನೀಡಿದಂತಾಗಿದೆ.

ಸದ್ಯ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿಯಿಂದ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರು, ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆಯವರು, ಜೆಡಿಎಸ್ ನಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್ ಡಿ ದೇವೇಗೌಡ ಅವರು ಕಣದಲ್ಲಿದ್ದಾರೆ. ಜೂನ್ 19ರಂದು ಚುನಾವಣೆ ನಡೆಯಲಿದ್ದು, ಇವರೆಲ್ಲರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next