ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ನಡೆಸಲು 17 ತಂಡಗಳನ್ನು ರಚಿಸಿರುವ ಬಿಜೆಪಿ, ನ.3ರಿಂದ 10ರ ವರೆಗೆ 33 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.
ಪ್ರತಿ ತಂಡವೂ 2 ಜಿಲ್ಲೆಗಳಂತೆ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ನಡೆಸಲಿದ್ದು, ರೈತರೊಂದಿಗೆ ಬೆಳೆ ನಷ್ಟ, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದೆಯಲ್ಲದೆ, ಜಾನುವಾರುಗಳ ಮೇವು ಹಾಗೂ ಕುಡಿಯುವ ನೀರು, ಬೆಳೆ ನಷ್ಟದಿಂದ ಆಹಾರೋತ್ಪಾದನೆ ಮೇಲೆ ಆಗಬಹುದಾದ ಪರಿಣಾಮ, ಜನರಿಗೆ ಅಗತ್ಯವಿರುವ ಕುಡಿಯುವ ನೀರು, ವಿದ್ಯುತ್ ಪೂರೈಕೆ ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆ ಹಾಕಲಿದೆ.
ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ. ಜಮೀನುಗಳು ಒಡೆದು ಹೋಗಿವೆ. ಕುಡಿಯುವ ನೀರು ಲಭಿಸುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ಕರೆಂಟ್ ದುಬಾರಿಯಾಗಿದೆ. ಸಣ್ಣ ಕೈಗಾರಿಕೆಗಳು ಬಂದ್ ಆಗಿವೆ. ಕೊಳವೆಬಾವಿಗಳು ಬತ್ತಿ ಹೋಗಿವೆ. ನೀರಿದ್ದರೂ ಅದನ್ನು ಸರಬರಾಜು ಮಾಡಲು ವಿದ್ಯುತ್ ಇಲ್ಲ. ಎಪಿಎಂಎಸಿ ಗಳಿಗೆ ಸಂಪೂರ್ಣ ವ್ಯಾಪಾರ ಇಲ್ಲವಾಗಿದೆ. ಇದು ಸೇರಿ ಗೋಶಾಲೆಗಳಿಗೂ ಭೇಟಿ ಮಾಡಲು ತಂಡವನ್ನು ಪಕ್ಷ ನಿಯೋಜಿಸಿದೆ. ಬರದ ಬಗ್ಗೆ ಚರ್ಚಿಸಲು ಅಧಿವೇಶನದಲ್ಲಿ ವಿಶೇಷ ಸಮಯ ನಿಗದಿಗೆ ಆಗ್ರಹಿಸಲಾಗುತ್ತದೆ.
ಎಲ್ಲಿ, ಯಾರ ಪ್ರವಾಸ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದ ತಂಡವು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡವು ತುಮಕೂರು ಮತ್ತು ಬೆಂಗಳೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ. ಮಾಜಿ ಸಚಿವ ಸಿ.ಟಿ. ರವಿ ನೇತೃತ್ವದ ತಂಡವು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡರೆ, ಶಾಸಕ ಅರವಿಂದ ಬೆಲ್ಲದ್ ನೇತೃತ್ವದ ತಂಡವು ರಾಯಚೂರು ಮತ್ತು ಯಾದಗಿರಿ ಭಾಗಕ್ಕೆ ಭೇಟಿ ನೀಡಲಿದೆ.
ಬಿ.ವೈ. ವಿಜಯೇಂದ್ರ (ಬೀದರ್, ಕಲಬುರಗಿ), ಕೆ.ಎಸ್. ಈಶ್ವರಪ್ಪ (ಬಳ್ಳಾರಿ, ಕೊಪ್ಪಳ), ಬಿ.ಶ್ರೀರಾಮುಲು (ಹಾವೇರಿ, ಗದಗ), ಅರವಿಂದ ಲಿಂಬಾವಳಿ (ಬೆಳಗಾವಿ, ಚಿಕ್ಕೋಡಿ), ಬಸನಗೌಡ ಪಾಟೀಲ್ ಯತ್ನಾಳ್ (ಮೈಸೂರು, ಚಾಮರಾಜನಗರ), ವಿ.ಸುನೀಲ್ ಕುಮಾರ್ (ಶಿವಮೊಗ್ಗ, ಉತ್ತರ ಕನ್ನಡ), ಆರಗ ಜ್ಞಾನೇಂದ್ರ (ಉಡುಪಿ, ಚಿಕ್ಕಮಗಳೂರು), ವಿಶ್ವೇಶ್ವರ ಹೆಗಡೆ ಕಾಗೇರಿ (ದಾವಣಗೆರೆ, ಚಿತ್ರದುರ್ಗ), ಆರ್.ಅಶೋಕ (ಮಂಗಳೂರು, ಕೊಡಗು), ಡಿ.ವಿ. ಸದಾನಂದ ಗೌಡ (ಮಂಡ್ಯ, ಹಾಸನ), ಕೋಟ ಶ್ರೀನಿವಾಸ ಪೂಜಾರಿ (ಬೆಂಗಳೂರು ಗ್ರಾಮಾಂತರ, ರಾಮನಗರ), ಗೋವಿಂದ ಕಾರಜೋಳ (ಧಾರವಾಡ, ವಿಜಯನಗರ).