Advertisement

ಹಾರುವ “ಕುದುರೆ”ಗಳಿಗೆ ಸ್ಥಳ ಬಿಡಲು ಬಿಜೆಪಿಯಿಂದಲೇ ಓಪನ್ ಆಫರ್

06:35 PM Jan 15, 2022 | Team Udayavani |

ಲಕ್ನೋ :ಇತರೆ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಪಕ್ಷಾಂತರದಿಂದ ಬಿಜೆಪಿ ತತ್ತರಿಸಿದೆ ಎಂಬ ರಾಜಕೀಯ ವ್ಯಾಖ್ಯಾನವನ್ನೇ ತಲೆಕೆಳಗೆ ಮಾಡಲು ಹೊರಟಿರುವ ಕೇಸರಿ ಪಡೆ, “ಹಾರುವ ಕುದುರೆ’’ಗಳಿಗೆ ಹೆಬ್ಬಾಗಿಲತ್ತ ಬೆರಳು ತೋರಿಸಿದೆ.

Advertisement

ಫೆ.೧೦ರಿಂದ ಆರಂಭಗೊಳುವ ಮೊದಲ ಎರಡು ಹಂತದ ಮತದಾನ ನಡೆಯುವ 107  ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಹಾಲಿ ಶಾಸಕರ ಪೈಕಿ 20  ಜನರಿಗೆ ಟಿಕೆಟ್ ನಿರಾಕರಿಸಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಈ ಶಾಸಕರು ಟಿಕೆಟ್ ನಿರಾಕರಿಸಿದರೆ ಮೌರ್ಯ ಹಾದಿ ಹಿಡಿಯುತ್ತೇವೆ ಎಂದು ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದ್ದರು. ಆದರೆ ಇದ್ಯಾವುದಕ್ಕೂ ಬಗ್ಗದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 20 ಜನರಿಗೆ ಟಿಕೆಟ್ ನಿರಾಕರಿಸಿದ್ದಾರೆ. ತನ್ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಾಂತರದ ಬೆದರಿಕೆ ಹಾಕಿದರೆ ತಾವು ಸೈರಿಸುವುದಿಲ್ಲ ಎಂಬ ಕಟ್ಟೆಚ್ಚರ ರವಾನಿಸಿದ್ದಾರೆ.

ಈಗಾಗಲೇ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿರುವ ೧೦೭ ಕ್ಷೇತ್ರಗಳ ಪೈಕಿ ಬಿಜೆಪಿ ೨೦೧೭ರಲ್ಲಿ ೮೩ ಕಡೆ ವಿಜಯ ಸಾಧಿಸಿತ್ತು. ಗೆದ್ದವರ ಪೈಕಿ ೬೩ ಜನರು ಮಾತ್ರ ಟಿಕೆಟ್ ಭದ್ರ ಪಡಿಸಿಕೊಂಡಿದ್ದು, ೨೦ ಹೊಸಮುಖಗಳನ್ನು ಪರಿಚಯಿಸಲಾಗಿದೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿಗಳ ಪೈಕಿಯೂ ಹೊಸ ಮುಖಗಳಿವೆ. ಈ ಮೂಲಕ ಚುನಾವಣೆಗೆ ಚಲನಶೀಲತೆಯ ಭಾಷ್ಯ ಬರೆಯುವುದಕ್ಕೆ ಬಿಜೆಪಿ ಮುಂದಾಗಿದೆ.

ಮೌರ್ಯ ತುಟ್ಟಿಯಾಗುವರೇ ? 
ಈಗಾಗಲೇ ಪಕ್ಷ ತೊರೆದಿರುವ ಸ್ವಾಮಿ ಪ್ರಸಾದ್ ಮೌರ್ಯ ವಿಚಾರದಲ್ಲಿ ಬಿಜೆಪಿ ಬೇರೆಯದೇ ಆದ ಲೆಕ್ಕಾಚಾರ ಹೊಂದಿದೆ. ಯಾದವೇತರ ರಾಜಕಾರಣದಲ್ಲಿ ಇತರೆ ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ಮೌರ್ಯರು ಉತ್ತರಪ್ರದೇಶದಲ್ಲಿ ನಿರ್ಣಾಯಕರೇನೋ ಸರಿ, ಆದರೆ ಆ ಪರ್ಯಾಯ ರಾಜಕಾರಣದ ಪ್ರತಿನಿಧಿ ಹಾಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೊರತು ಸ್ವಾಮಿ ಪ್ರಸಾದ್ ಅಲ್ಲ.

ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ವಿಚಾರದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಮುಲಾಯಂ ಸಿಂಗ್ ಯಾದವ್‌ಗೆ ಸರಿಸಮಾನರು ಎಂಬ ವ್ಯಾಖ್ಯಾನ ಬಿಜೆಪಿಯಿಂದ ಈ ಕೇಳಿ ಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೌರ್ಯ ಪುತ್ರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಗೆಲ್ಲಿಸಲಾಗಿತ್ತು. ಈಗ ತಮ್ಮ ಪುತ್ರನಿಗೂ ಅವರು ಟಿಕೆಟ್ ಬಯಸಿದ್ದರು. ಇದನ್ನು ನಿರಾಕರಿಸಿದಕ್ಕಾಗಿ ಪಕ್ಷ ತೊರೆದಿದ್ದಾರೆಯೇ ವಿನಾ ಬೇರೆ ಯಾವುದೇ ಸೈದ್ಧಾಂತಿಕ ಕಾರಣವನ್ನು ಸ್ವಾಮಿ ಪ್ರಸಾದ್ ಹೊಂದಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿದೆ. ಹೀಗಾಗಿ ಇತರೆ ಹಿಂದುಳಿದ ವರ್ಗದ ಮೇಲೆ ಬಿಗಿ ಹಿಡಿತ ಹೊಂದಿರುವ ಕೇಶವ ಪ್ರಸಾದ್ ಮೌರ್ಯ ಅವರನ್ನು ಯೋಗಿ ಆದಿತ್ಯನಾಥ್ ಬಲವಾಗಿ ನಂಬಿಕೊಂಡಿದ್ದಾರೆ.

Advertisement

ಲಾಲ್ ಟೋಪಿ
ಇದೆಲ್ಲದರ ಮಧ್ಯೆ ಚುನಾವಣಾ ಹೊಸ್ತಿಲಲ್ಲಿ ಬಿಎಸ್ಪಿಯ ಆಪ್ತ ಅತ್ತರು ವ್ಯಾಪಾರಿಗಳ ಮೇಲೆ ನಡೆದ ಐಟಿ ದಾಳಿ ಸಂದರ್ಭದಲ್ಲಿ ದೊರೆತ ಅಪಾ ಪ್ರಮಾಣದ ನಗದು ಹಾಗೂ ಚಿನ್ನಾಭರಣ ಪ್ರಕರಣ ಈ ಚುನಾವಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. “ಲಾಲ್ ಟೋಪಿ” (ಸಮಾಜವಾದಿಗಳ) ಗಳ ಬಗ್ಗೆ ಈ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ನಿರಂತರ ಟೀಕೆ ಈಗ ಉತ್ತರ ಪ್ರದೇಶದಲ್ಲಿ ಚುನಾವಣಾ ಲಾವಣಿ ಸ್ವರೂಪ ಪಡೆದುಕೊಳ್ಳುತ್ತಿದೆ.

ಸಮಾಜವಾದಿ, ಬಹುಜನ ಸಮಾಜ, ಕಾಂಗ್ರೆಸ್ ಪಕ್ಷಗಳು ಈ ಬಾರಿ ಯಾದವರು, ಠಾಕೂರರು ಹಾಗೂ ಮೇಲುವರ್ಗದ ಓಲೈಕೆಗೆ ಅತಿಯಾಗಿ ಇಳಿದಿರುವುದರಿಂದ ಬಿಜೆಪಿ ಇತರೆ ಹಿಂದುಳಿದ ವರ್ಗ ಹಾಗೂ ದಲಿತ ಮತಗಳ ಮೇಲೆ ಹೆಚ್ಚು ಕಣ್ಣಿಟ್ಟಿದೆ. ತೆರೆಮರೆಯಲ್ಲಿ ಸಂಘಪರಿವಾರದ ತಂತ್ರಗಾರಿಕೆಯೂ ನಡೆಯುತ್ತಿದ್ದು, “ಸುಲಭಕ್ಕೆ ಬಿಡುವುದಿಲ್ಲ’’ ಎಂಬ ಸಂದೇಶವನ್ನು ಬಿಜೆಪಿ ರವಾನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next