ಮೈಸೂರು: ಉನ್ನತ ಶಿಕ್ಷಣ ಖಾತೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವ ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 73ರಲ್ಲಿ ಸಂಸ್ಥಾ ಕಾಂಗ್ರೆಸ್, 78ರಲ್ಲಿ ರೆಡ್ಡಿ ಕಾಂಗ್ರೆಸ್‌ನಲ್ಲಿದ್ದೆ. ಬಿಜೆಪಿಗೂ ಹೋಗಿ ನೋಡಿ ಬಂದಿದ್ದೇನೆ. ಹೀಗಾಗಿ, ಬಿಜೆಪಿಗೆ ಹೋಗುವ ಪ್ರಮೇಯವೇ ಇಲ್ಲ. ಬಿಜೆಪಿ ನಾಯಕರೂ ಕೂಡ ನನ್ನನ್ನು ಪಕ್ಷಕ್ಕೆ ಕರೆದಿಲ್ಲ.
ಸ್ಥಳೀಯವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ, ನಾವೆಲ್ಲ ಕಾರ್ಯಕ್ರಮಗಳಿಗೆ ಒಂದೇ ಕಾರಿನಲ್ಲಿ ಹೋಗುತ್ತೇವೆ. ಅದಕ್ಕೆ ಜಿ.ಟಿ.ದೇವೇಗೌಡರು ಬಿಜೆಪಿಗೆ ಹೋಗುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ವಿಶ್ವನಾಥ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವಂತೆ ಮನವೊಲಿಸುತ್ತೇವೆ. ಇಡೀ ದೇಶ ಮತ್ತು ರಾಜ್ಯದಲ್ಲಿ ಮೋದಿಯವರ ಅಲೆಯಿಂದಾಗಿ ಬಿಜೆಪಿ ಹೆಚ್ಚು ಸ್ಥಾನಗಳಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಹಿಂದೆಂದೂ ಇಲ್ಲದಷ್ಟು ಕಳಪೆ ಸಾಧನೆ ಮಾಡಿವೆ. ಸೋಲಿನ ಬಗ್ಗೆ ಪರಾಮರ್ಶೆ ಮಾಡಲು ಸಮಿತಿ ರಚನೆ ಮಾಡುವಂತೆ ಒತ್ತಾಯ ಮಾಡುತ್ತೇನೆ.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ